ಮಹಾನಗರ ಪಾಲಿಕೆ ಸಾಮಾನ್ಯ ಸಭೆ | ಉಸ್ತವಾರಿ ಸಚಿವ ಡಾ.ಎಂ.ಬಿ.ಪಾಟೀಲ ಖಡಕ್ ಸೂಚನೆ
ವಿಜಯಪುರ: ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ತತಕ್ಷಣ ಕಾರ್ಯ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಕಟ್ಟುನಿಟ್ಟಾಗಿ ಹೇಳಿದರು.
ಸೋಮವಾರ ನಗರದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರಕ್ಕೆ ೮೪ ಎಂ.ಎಲ್.ಡಿ ನೀರು ಅವಶ್ಯಕತೆ ಇದ್ದು, ಸದ್ಯ ನಮಗೆ ೫೦ ಎಂ.ಎಲ್.ಡಿ ನೀರು ಲಭ್ಯವಾಗುತ್ತಿದೆ. ಆದ್ದರಿಂದ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಖಡಕ್ ಸೂಚನೆ ನೀಡಿದರು.
ನಗರದಲ್ಲಿರುವ ಹಲವಾರು ಐತಿಹಾಸಿಕ ಭಾವಿಗಳನ್ನು ಈಗಾಗಲೇ ಸ್ವಚ್ಚಗೊಳಿಸಲು ಕ್ರಮವಹಿಸಿದ್ದು, ಈ ಬಾವಿಗಳಲ್ಲಿರುವ ನೀರನ್ನು ಇತರ ಗೃಹೋಪಯೋಗಿ ಉಪಯೋಗಗಳಿಗೆ ಬಳಕೆ ಮಾಡಿದಲ್ಲಿ ಕುಡಿಯುವ ನೀರಿನ ಒತ್ತಡ ತಗ್ಗಿಸಬಹುದಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಈಗಾಗಲೇ ಕೊರೆಯಿಸಿದ ಬೋರ್‌ವೆಲ್‌ಗಳಿಗೆ ಶೀಘ್ರವಾಗಿ ಮೋಟಾರ್‌ನ್ನು ಅಳವಡಿಸಿ ನೀರನ್ನು ಬಳಸುವಂತೆ ಸೂಚಿಸಿದರು.
ಮಹಾನಗರ ಪಾಲಿಕೆ ಸದಸ್ಯರುಗಳು ತಮ್ಮ ತಮ್ಮ ವಾರ್ಡುಗಳಲ್ಲಿರುವ ಕೊಳವೆ ಬಾವಿಗಳನ್ನು ಗುರುತಿಸಿ ಸಣ್ಣ ಪುಟ್ಟ ದುರಸ್ತಿಗಳಿದ್ದಲ್ಲಿ ದುರಸ್ತಿಗೊಳಿಸಿ ಉಪಯೋಗಿಸಲು ಕ್ರಮ ವಹಿಸಬೇಕು. ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಬೊರವೆಲ್ ಮಾಲೀಕರನ್ನು ಮನವೊಲಿಸಿ ನೀರಿಗಾಗಿ ಬಳಸಿಕೊಳ್ಳಬೇಕು. ಅತೀ ಅವಶ್ಯಕತೆ ಇದ್ದಲ್ಲಿ ನೀರಿನ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಬೇಕು. ಒಟ್ಟಾರೆ ನಗರದ ಜನತೆಗೆ ನೀರಿನ ಕೊರತೆಯಾಗದಂತೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗಳಿಗೆ ತಿಳಿಸಿದರು.
ಮುಂದಿನವಾರ ಮತ್ತೊಮ್ಮೆ ನಗರದ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಭೆ ನಡೆಸುವೆ. ಒಂದು ವೇಳೆ ಕುಡಿವ ನೀರಿನ ಸಮಸ್ಯೆಗಳು ಕಂಡು ಬಂದಲ್ಲಿ ಅಧಿಕಾರಿಗಳನ್ನೆ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಕುರಿತು ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರುಗಳು ಕೂಡಿ ಸಭೆಯನ್ನು ಕರೆದು ನಗರಾದ್ಯಾಂತ ಕುಡಿಯುವ ನೀರಿಗಾಗಿ ತುರ್ತು ಕ್ರಮಕ್ಕೆ ಅವಶ್ಯವಿರುವ ಅನುದಾನ ಬಳಕೆಗೆ ಅವಕಾಶ ಕಲ್ಪಿಸಿಕೊಂಡು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾಪೌರರಾದ ಶ್ರೀಮತಿ ಮಹೇಜಬಿನ್ ಹೊರ್ತಿ ಅವರು ಮಾತನಾಡಿ, ನಗರದ ಅಭಿವೃದ್ಧಿಗೆ ಸಹಕಾರ ಕೋರಿದರು.
ಉಪ ಮಹಾಪೌರ ದಿನೇಶ ಹಳ್ಳಿ ಮಾತನಾಡಿ, ನಗರದ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಗಮನ ನೀಡೋಣ. ನಗರವನ್ನು ಸ್ವಚ್ಚ ಹಾಗೂ ಸುಂದರ ನಗರವನ್ನಾಗಿ ಅಭಿವೃದ್ಧಿ ಪಡಿಸೋಣ ಈ ನಿಟ್ಟಿನಲ್ಲಿ ಅಧಿಕಾರಿಗಳು ಪಾಲಿಕೆ ಸದಸ್ಯರು ಕೈ ಜೋಡಿಸಬೇಕು ಎಂದು ಹೇಳಿದರು.
ನಗರದಲ್ಲಿ ಕೆಲವು ಬಡಾವಣೆಗಳಲ್ಲಿ ದಿನದ ೨೪ ಗಂಟೆ ನೀರು ಸರಬರಾಜು ಆಗುತ್ತಿದ್ದು ಹೆಚ್ಚಿನ ನೀರನ್ನು ಪೋಲು ಮಾಡಲಾಗುತ್ತಿದೆ ಅದನ್ನು ತಡೆಗಟ್ಟಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಬೂತನಾಳ ಕೆರೆಯಿಂದ ನಗರದ ೦೭ ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಮುಂಬರುವ ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುವಂತೆ ಕ್ರಮ ವಹಿಸಲು ಸದಸ್ಯರು ಕೋರಿದರು.
ಸಭೆಯಲ್ಲಿ ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ ಸೌದಾಗರ, ಉಪ ಆಯುಕ್ತ ಮಹಾವೀರ ಬೋರಣ್ಣವರ, ಪಾಲಿಕೆ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

