ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆ | ಪಾಳುಬಿದ್ದ ಗೋದಾಮಿನಲ್ಲಿ ಕಾರ್ಯನಿರ್ವಹಣೆ
*– ಬಂದೇನವಾಜ್.ಐ.ನಾಲತವಾಡ*
ಕೆಂಭಾವಿ: ಸರಕಾರ ಜನಸಾಮಾನ್ಯರ ಒಳಿತಿಗಾಗಿ ತನ್ನ ಅನುದಾನದಿಂದ ಸಾಕಷ್ಟು ಪ್ರಮಾಣದಲ್ಲಿ ಯೋಜನೆಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದ ಕೆಲವು ಯೋಜನೆಗಳು ಹಳ್ಳ ಹಿಡಿದಿವೆ,
ಅದರಂತೆಯೇ ಪಟ್ಟಣದಲ್ಲಿ ಶಾಸಕರ ಇಚ್ಚಾಶಯದಂತೆ ಸುಮಾರು 53 ಲಕ್ಷ ರೂ. ವೆಚ್ಚದಲ್ಲಿ ನೂತನ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಮುಗಿದು ವರ್ಷ ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯ ಕಾಣದಂತಾಗಿದೆ. ಇದು ಕ್ಷೇತ್ರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ ಹಲವು ವರ್ಷಗಳಿಂದ ಪೊಲೀಸ್ ಠಾಣೆ ಹಿಂಬದಿಯ ಪಾಳುಬಿದ್ದ ಕಾಡಾ ವ್ಯಾಪ್ತಿಯ ಗೋದಾಮಿನಲ್ಲಿ ರೈತ ಸಂಪರ್ಕ ಕೇಂದ್ರ ಸಧ್ಯ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ಅನುಕೂಲ ರೈತರಿಗೆ ಆಗಲಿ ಎಂಬ ಕಾರಣದಿಂದ ಸರ್ಕಾರ ಈ ಹೊಸ ರೈತ ಸಂಪರ್ಕ ಕೇಂದ್ರ ನಿರ್ಮಿಸಿದೆ. ಆದರೆ ಈವರೆಗೂ ಈ ಕೇಂದ್ರ ಉದ್ಘಾಟನೆಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸರ್ಕಾರದಿಂದ ಬಂದ ಯೋಜನೆಗಳಾದ ಗೊಬ್ಬರ ದಾಸ್ತಾನು ಮಾಡಲು ಮತ್ತು ಕಚೇರಿ ನಿರ್ವಹಣೆಗಾಗಿ ಸರ್ಕಾರ ಅನುದಾನ ಒದಗಿಸಿ ರೈತ ಸಂಪರ್ಕ ಕೇಂದ್ರ ನಿರ್ಮಾಣ ಮಾಡಿದೆ. ಈ ಸುಸಜ್ಜಿತ ಕಟ್ಟಡ ಪಾಳು ಬಿದ್ದಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ.
ಪೂರ್ಣಗೊಂಡು ವರ್ಷ ಗತಿಸಿದರೂ ಉದ್ಘಾಟನೆಗೆ ಇಲಾಖೆ ಏಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ವಲಯದ ರೈತರಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ನೂತನ ಕಟ್ಟಡ ನಿರ್ಮಿಸಿದ ಸ್ಥಳ ಸ್ಮಶಾನ ಭೂಮಿಯಾಗಿದ್ದು, ಅಲ್ಲಿ ಸರ್ಕಾರದ ಜಾಗ (ಗಾಂವಠಾಣ) ಇರುವುದರಿಂದ ಕಟ್ಟಡ ನಿರ್ಮಿಸಲಾಗಿದೆ. ಸ್ಮಶಾನ ಜಾಗದಲ್ಲಿ ಜನರ ಓಡಾಟ ಇರದ ಕಾರಣ ಅದು ಉದ್ಘಾಟನೆಯಾಗಿಲ್ಲ ಎಂಬ ಮಾತು ಒಂದೆಡೆ ಕೇಳಿ ಬರುತ್ತಿದ್ದರೆ ಸುತ್ತಮುತ್ತಲಿನ ಜಾಗ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಕೃಷಿ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡ ನಂತರವೇ ಈ ಕಟ್ಟಡ ಉದ್ಘಾಟನೆಗೆ ಸಮಯ ನಿಗದಿ ಮಾಡುತ್ತದೆ ಎಂಬ ಮಾತು ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆ ಸರ್ಕಾರದ ಹಣ ಖರ್ಚಾಗಿ ಸುಸಜ್ಜಿತ ರೈತರ ಸಂಪರ್ಕ ಕೇಂದ್ರ ನಿರ್ಮಿಸಿದ್ದರೂ ಜನತೆಯ ಉಪಯೋಗಕ್ಕೆ ಬಾರದೆ ಇರುವುದು ಸರಿಯಲ್ಲ. ಹೀಗಾಗಿ ಕೂಡಲೇ ಕಟ್ಟಡ ಲೋಕಾರ್ಪಣೆಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬುದು ಹಲವು ರೈತರ ಒತ್ತಾಯವಾಗಿದೆ.

