ಆಲಮಟ್ಟಿಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದದಲ್ಲಿ ಡಿಡಿಪಿಐ ನಾಗೂರ ಅಭಿಮತ
ಆಲಮಟ್ಟಿ: ಪಠ್ಯ ಪುಸ್ತಕದ ಸಾಂಗತ್ಯದಲ್ಲಿ ಮಕ್ಕಳು ಪ್ರೀತಿ ಅದರದಿಂದ ಬೆರೆತರೆ ಖಂಡಿತ ಭವಿಷ್ಯತ್ತಿನ ಜೀವನದಲ್ಲಿ ಜೀವನೋಲ್ಲಾಸ ಕಾಣಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಅಭಿಪ್ರಾಯಿಸಿದರು.
ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
ಪರೀಕ್ಷೆಗಳು ಸಮೀಪಿಸುತ್ತಿವೆ. ಮಕ್ಕಳು ಓದು,ಬರಹದೆಡೆಗೆ ಹೆಚ್ಚು ಗಮನ ಹರಿಸಬೇಕು. ಕಲಿಕೆಯಲ್ಲಿ ಪರಿಪೂರ್ಣತೆ ಇಲ್ಲದಿದ್ದರೆ ಅಥವಾ ಪ್ರಶ್ನೋತ್ತರ ಕೊರತೆಯ ಕಾಡುತ್ತಿದ್ದರೆ ಅದನ್ನು ಶ್ರಮಪಟ್ಟು ಸರಿದೂಗಿಸಿಕೊಳ್ಳಬೇಕು. ಅನ್ಯ ಸಂಗತಿಗಳಿಗೆ ತಲೆ ಕೆಡಿಸಿಕೊಳ್ಳದೇ ಅದ್ಯಯನಾಸಕ್ತಿ ಬೆಳೆಸಿಕೊಳ್ಳಬೇಕು. ಪುಸ್ತಕ ಪ್ರೇಮ, ಬರಹದ ಒಡನಾಟ ತಮ್ಮನ್ನು ಉನ್ನತಿಯಡೆಗೆ ಕೊಂಡೊಯ್ಯುತ್ತದೆ. ನಾಗರಿಕ ಸಮಾಜದಲ್ಲಿ ತಮ್ಮ ಪ್ರತಿಬಿಂಬದ ಛಾಯೆ ಸೊಗಸಾಗಿ ತೋರ್ಪಡಿಸುತ್ತದೆ ಎಂದರು.
ಕಲಿಕೆಯಲ್ಲಿ ಏರುಪೇರು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಶ್ನೋತ್ತರ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಯಾವ ಪಠ್ಯ ವಿಷಯದಲ್ಲಿ ಸಮರ್ಪಕವಾಗಿ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲವೊ ಅದರತ್ತ ಚಿತ್ತ ಹರಿಸಬೇಕು. ಎಷ್ಟು ಶ್ರಮಿಸುತ್ತಿರೊ ಅಷ್ಟು ತಮಗೆ ಪ್ರಯೋಜನ. ಫಲಿತಾಂಶ ಹೆಚ್ಚಳಕ್ಕೂ ಅನುಕೂಲ. ಶ್ರಮಕ್ಕೆ ತಕ್ಕಂತೆ ಪ್ರತಿಫಲನ ಲಭಿಸುತ್ತದೆ. ಏಕಾಗ್ರತೆ, ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸನ್ನದರಾಗಿ. ಇದು ನನ್ನ ಏಳಿಗೆ, ನನ್ನ ಪ್ರಗತಿ,ನನ್ನ ಜ್ಞಾನ ಎಂದು ನಿಮ್ಮ ಸಾಮಥ್ರ‍್ಯ ಓರೆಗಲ್ಲಿಗೆ ಹಚ್ಚಿ. ನಾನು ಬೆಳೆಯಬೇಕು, ಶಿಕ್ಷಣ ರಂಗದಲ್ಲಿ ವಿಶೇಷ ಪ್ರಗತಿ ಕಾಣಬೇಕು. ಓದುಬರಹದ ಫೀಲ್ ಮಾಡಿಕೊಂಡರೆ ಯಶಸ್ಸು ತಮ್ಮದು. ಸ್ಪಷ್ಟ ಓದು, ಬರಹದ ಪ್ರಭುತ್ವತೆಯೇ ಶೈಕ್ಷಣಿಕ ಪ್ರಗತಿಗೆ ಕಾರಣ. ಒಳ್ಳೆಯ ವಿಚಾರ, ಉತ್ತಮ ಸಂಗ ಶ್ರೇಯಸ್ಸಿಗೆ ಪೂರಕವಾಗಿವೆ. ಮೌಲ್ಯಾಧಾರಿತ ವ್ಯಕ್ತಿತ್ವ ರೂಪಿಸಿಕೊಂಡು ಪಾಲಕ, ಪೋಷಕ, ಸಮಾಜದ ಋಣಭಾರ ಯುವಜನತೆ ತೀರಿಸಲು ಮುಂದಾಗಬೇಕು ಎಂದು ಡಿಡಿಪಿಐ ಎನ್.ಎಚ್.ನಾಗೂರ ಹೇಳಿದರು.
ಪುಸ್ತಕ ಒಪ್ಪಬೇಕು ಬರಹ ಮೆಚ್ಚಬೇಕು.! ಮಕ್ಕಳು ಜ್ಞಾನದ ಜೊತೆಗೆ ಬರಹ ಕೌಶಲ್ಯ ಮೈಗೂಡಿಸಿಕೊಳ್ಳುವುದು ಇಂದಿನ ಅತ್ಯಗತ್ಯ. ಕಲಿಕೆಗೆ ಸಮರ್ಥವಾಗಿ ಪರಿಹಾರ ಕಂಡುಕೊಳ್ಳಬೇಕು. ಪುಸ್ತಕ ಒಪ್ಪಿಕೊಂಡು ಬರಹವನ್ನು ಮೆಚ್ಚಿಕೊಂಡು ಬರೆಯುವ ಹವ್ಯಾಸ ಮಕ್ಕಳಲ್ಲಿ ಮೂಡಬೇಕು. ಶೈಕ್ಷಣಿಕ ಭವ್ಯತೆಗೆ ಶಿಕ್ಷಕರ ನವ್ಯತೆಯ ಬೋಧನೆ ಮಾರ್ಗದರ್ಶನವಾಗಲಿ. ಎಸ್ಸೆಸ್ಸೆಲ್ಸಿ ಮೆಟ್ಟಿಲನ್ನು ಸರಾಗವಾಗಿ ಮಕ್ಕಳು ಮೆಟ್ಟಲಿ ಎಂಬುದೇ ಇಲಾಖೆಯ ಉದ್ದೇಶ. ವೃತ್ತಿಪರ ಕಲಿಕಾಂಶ ಸಾಮಥ್ರ‍್ಯ ಗುರುಗಳು ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಆಸಕ್ತಿದಾಯಕ ಕಲಿಕೆಗೆ ಉತ್ತೇಜಿಸಿ ಕಲಿಕಾ ಸ್ನೇಹಿ ವಾತಾವರಣ ನಿರ್ಮಿಸಬೇಕು. ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆ ಉಂಟು ಮಾಡಲು ತಮ್ಮ ಜ್ಞಾನದ ಮಕರಂದದೊಂದಿಗೆ ಶ್ರಮಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಫಲಿತಾಂಶ ಸುಧಾರಿಸಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಸಂಕಲ್ಪ ಮಾಡಬೇಕು ಎಂದರು.
ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಯು.ಎ.ಹಿರೇಮಠ, ಎಂ.ಎ.ಬಳಬಟ್ಟಿ, ಮಹೇಶ್ ಗಾಳಪ್ಪಗೋಳ, ಜಿ.ಎಂ.ಹಿರೇಮಠ. ಕೆ.ಜಗದೇವಿ ಇತರರಿದ್ದರು.

