ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮೇಳೈಸಿದಾಗ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಕ್ರೀಡೆಯು ಮಕ್ಕಳಲ್ಲಿ ದೈಹಿಕ ಕ್ಷಮತೆಯ ಜೊತೆಗೆ ಸೃಜನಶೀಲತೆ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದು ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಆಲಮಟ್ಟಿ ರಸ್ತೆಯ ಬಿಎಎಸ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಗುರುವಾರ ಶಾಲೆಯ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕ್ರೀಡೋತ್ಸವವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೂ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂತಹ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ಬೆಳೆಯಬೇಕು ಎಂದು ಆಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಬಡದಾನಿ ಮಾತನಾಡಿ, ಕ್ರೀಡೆಗಳು ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸ್ಥೆöÊರ್ಯವನ್ನೂ ಗಟ್ಟಿಗೊಳಿಸುತ್ತವೆ. ಕ್ರೀಡಾಂಗಣದಲ್ಲಿ ಎದುರಾಗುವ ಸೋಲನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ, ಅದನ್ನೇ ಮುಂದಿನ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳಬೇಕು. ಸೋಲು ಮುಂದಿನ ಗೆಲುವಿಗೆ ನಾಂದಿ ಎಂಬ ಸತ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿಯಬೇಕು. ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಸಂಕಲ್ಪದೊಂದಿಗೆ ಆರಂಭವಾದ ಈ ಶಾಲೆಯಲ್ಲಿ ಎರಡೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಸಂಸ್ಥಾಪಕ ಶಿವನಗೌಡ ಬಿರಾದಾರ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಂಸ್ಥೆಯು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಮಕ್ಕಳ ಕ್ರೀಡಾಸ್ಫೂರ್ತಿಗೆ ಪಾಲಕರ ಪ್ರೋತ್ಸಾಹವೂ ಮುಖ್ಯ ಎಂಬ ಉದ್ದೇಶದಿಂದ ಈ ಬಾರಿ ಮೂರು ದಿನಗಳ ಕ್ರೀಡೋತ್ಸವ ಆಯೋಜಿಸಲಾಗಿದ್ದು, ಅಂತಿಮ ದಿನ ಪಾಲಕರಿಗೂ ವಿಶೇಷ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬೆಳಗಲ್ಲ ಹಾಗೂ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಮಾತನಾಡಿದರು. ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸುಮಂಗಳಾ ಬಿರಾದಾರ, ಗೀತಾ ಬಿರಾದಾರ, ಪ್ರಾಂಶುಪಾಲ ಅಶೋಕ ತುಪ್ಪದ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ, ಸತೀಶ ವಾಲಿಕಾರ ಸೇರಿದಂತೆ ಶಿಕ್ಷಕ ವೃಂದ ಹಾಗೂ ಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಲಕ್ ಹಜೇರಿ ಸ್ವಾಗತಿಸಿದರು. ರನ್ವಿತಾ ಅನ್ನಗೌನಿ, ರಿಷಿಕಾ ಸಜ್ಜನ ಮತ್ತು ರಾಜಮಾ ಕಂದಗಲ್ಲ ನಿರೂಪಿಸಿದರು. ಅಮೋಲಿಕ ಕುಲಕರ್ಣಿ ವಂದಿಸಿದರು.
ಗುಂಡು ಎಸೆದು ಹುರಿದುಂಬಿಸಿದ ಡಿವೈಎಸ್ಪಿ
ಕಾರ್ಯಕ್ರಮದಲ್ಲಿ ಕೇವಲ ಮುಖ್ಯ ಅತಿಥಿಯಾಗಿ ವೇದಿಕೆಗೆ ಸೀಮಿತವಾಗದ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸ್ವತಃ ಮೈದಾನಕ್ಕಿಳಿದು ನಿಜವಾದ ಕ್ರೀಡಾಸ್ಫೂರ್ತಿ ಮೆರೆದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿ, ೧೦೦ ಮೀಟರ್ ಓಟಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಅವರು ಗುಂಡು ಎಸೆತ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.
ಅಧಿಕಾರದ ಗಾಂಭೀರ್ಯವನ್ನು ಬದಿಗಿಟ್ಟು ಕಬ್ಬಿಣದ ಗುಂಡನ್ನು ಕೈಗೆತ್ತಿಕೊಂಡು ಅವರು ಎಸೆದ ಪರಿ ನೆರೆದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಲ್ಲಿ ಮಿಂಚಿನ ಸಂಚಲನ ಮೂಡಿಸಿತು. ಡಿವೈಎಸ್ಪಿ ಅವರ ಈ ಉತ್ಸಾಹಕ್ಕೆ ಇಡೀ ಕ್ರೀಡಾಂಗಣದಲ್ಲಿ ಚಪ್ಪಾಳೆಯ ಸುರಿಮಳೆಯೇ ಸುರಿಯಿತು.

