ಸೋಮಜಾಳದಲ್ಲಿ ಎಬಿ ಫೌಂಡೇಶನ್ ಏರ್ಪಡಿಸಿದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿದ ಪಂಜಾಬಿನ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರಜೀತ್ ಸಿಂಗ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ತುಂಬಾ ಸಹಕಾರಿ. ಕಾರಣ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಟೋಟಗಳಿಗೂ ಪ್ರಾಧಾನ್ಯತೆ ಕೊಡಬೇಕು. ಭವಿಷ್ಯದಲ್ಲಿ ವಿಶ್ವ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎತ್ತಿಹಿಡಿಯಬೇಕೆಂದು ಪಂಜಾಬಿನ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರಜೀತ್ ಸಿಂಗ್ ಕರೆ ನೀಡಿದರು.
ಜಿಲ್ಲೆಯ ಆಲಮೇಲ ತಾಲ್ಲೂಕಿನ ಸೋಮಜಾಳ ಗ್ರಾಮದಲ್ಲಿ ನ.19 ರಂದು ದಿ.ಆಕಾಶ ಬಿರಾದಾರ ಸ್ಮರಣಾರ್ಥ ಎಬಿ ಫೌಂಡೇಶನ್ ಏರ್ಪಡಿಸಿದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಬಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಪುಟ್ಟಪರ್ತಿ ಶ್ರೀ ಸಾಯಿ ವಿಮಾನ ನಿಲ್ದಾಣ ನಿರ್ದೇಶಕ ಕೆ.ಎಸ್.ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮ್ಯಾರಥಾನ್ ಕ್ರೀಡೆಯ ಕುರಿತು ಅರಿವು ಮೂಡಿಸಲು ಹಾಗೂ ಅವರಿಗೆ ಉತ್ತೇಜನ ನೀಡಲು ತಾವು ಕಳೆದ ವರ್ಷದಿಂದ ಈ ಮ್ಯಾರಥಾನ್ ಸ್ಪರ್ಧೆಯನ್ನು ತಮ್ಮ ಹುಟ್ಟೂರು ಸೋಮಜಾಳದಲ್ಲಿ ಆರಂಭಿಸಿದ್ದು, ಇದನ್ನು ಪ್ರತಿ ವರ್ಷ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ತಮ್ಮ ಎಬಿ ಫೌಂಡೇಶನ್ ಮೂಲಕ ಈ ಭಾಗದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತರಬೇತಿ ಹಾಗೂ ಸೌಲಭ್ಯಗಳನ್ನು ನೀಡುವ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ರಾಜಕೀಯ ಧುರೀಣ ಯಶವಂತ್ರಾಯ ರೂಗಿ (ಮಲಘಾಣ) ಅವರು ದಿ.ಆಕಾಶ ಬಿರಾದಾರ ಅವರ ಕ್ರೀಡಾ ಕೌಶಲ್ಯ ಮತ್ತು ಅವರ ಸಾಧನೆಯನ್ನು ಸ್ಮರಿಸಿ, ಅವರ ನೆನಪಿಗಾಗಿ ಇಂತಹ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಿದ ಅವರ ತಂದೆ, ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾ ತರಬೇತುದಾರ ಕಲ್ಯಾಣಿ ಬಿರಾದಾರ ಅವರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ಈ ವೇಳೆ ಮುಖ್ಯ ಅತಿಥಿಗಳಾದ ಬೆಂಗಳೂರಿನ ದಯಾನಂದ ಸಾಗರ ವಿಶ್ವವಿದ್ಯಾಲಯ ನಿರ್ದೇಶಕ ನಂಜುಂಡಸ್ವಾಮಿ ಹಾಗೂ ಬೆಂಗಳೂರಿನ ಸರಳಾ ಬಿರ್ಲಾ ಅಕಾಡೆಮಿ ಕ್ರೀಡಾ ನಿರ್ದೇಶಕ ಮಂಜುನಾಥ ಅವರು ಕ್ರೀಡೆಯ ಮಹತ್ವ ಕುರಿತು ಮಾತನಾಡಿದರು.
ನಾಲ್ಕು ವಿಭಾಗಗಳ ಈ ಸ್ಪರ್ಧೆಯಲ್ಲಿ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನಗಳ ವಿಜೇತರಿಗೆ ಕ್ರಮವಾಗಿ ರೂ.5000/-, ರೂ.3000/-, ಹಾಗೂ ರೂ.2000/- ಬಹುಮಾನದ ಮೊತ್ತವನ್ನು ನೀಡಿ ಗೌರವಿಸಲಾಯಿತು.
ಜಿಲ್ಲೆಯ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸೇರಿದಂತೆ ಅಧಿಕ ಸಂಖ್ಯೆಯ ಗ್ರಾಮಸ್ಥರಿದ್ದರು.

ಮ್ಯಾರಥಾನ್ ಸ್ಪರ್ಧೆ ಬಹುಮಾನ ವಿಜೇತರು
೧೯ ವಯೋಮಿತಿ: 10 ಕಿ.ಮೀ ದೂರದ ಸ್ಪರ್ಧೆ (ಪುರುಷ)
ಪ್ರದೀಪ ಜಾಧವ ಪ್ರಥಮ, ವಿನೋದ್ ದ್ವಿತೀಯ ಮತ್ತು ಶರಣು ಸೋನಾ ತೃತೀಯ ಸ್ಥಾನ
೧೯ ವಯೋಮಿತಿ: 10 ಕಿ.ಮೀ ದೂರದ ಸ್ಪರ್ಧೆ (ಮಹಿಳೆ)
ಸಹನಾ ತುಪ್ಪದ ಪ್ರಥಮ, ವೈಭವಿ ಹುಟಗಿ ದ್ವಿತೀಯ ಮತ್ತು ರಿಜ್ವಾನಾ ವಾಲಿಕಾರ ತೃತೀಯ ಸ್ಥಾನ
17 ವರ್ಷ ವಯೋಮಿತಿ: ೫ ಕಿ.ಮೀ ದೂರದ ಸ್ಪರ್ಧೆ (ಪುರುಷ)
ಪ್ರಸಾದ ಪಾಟೀಲ ಪ್ರಥಮ, ಪ್ರಬುಗೌಡ ಬಿರಾದಾರ ದ್ವಿತೀಯ ಮತ್ತು ಗೌತಮ್ ಹರಿಜನ ತೃತೀಯ ಸ್ಥಾನ
17 ವರ್ಷ ವಯೋಮಿತಿ: ೫ ಕಿ.ಮೀ ದೂರದ ಸ್ಪರ್ಧೆ (ಮಹಿಳೆ)
ರಿಜವಾನಾ ಲಾಳಸಂಗಿ ಪ್ರಥಮ, ವಿಜಯಲಕ್ಷ್ಮಿ ಡಂಬಳ ದ್ವಿತೀಯ ಮತ್ತು ಲಕ್ಷ್ಮಿ ಕಡಣಿ ತೃತೀಯ ಸ್ಥಾನ

