ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಚನ್ನಬಸವಣ್ಣನವರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ “ಚಿನ್ಮಯಜ್ಞಾನಿ’ ಎನಿಸಿದ್ದಾರೆ ಎಂದು ಶರಣಸಂಗಮ ಸೇವಾ ಸಮೀತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.
ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಚನ್ನಬಸವಣ್ಣನವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧೀಶರಾಗಿದ್ದ ಚನ್ನಬಸವಣ್ಣ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅಂತೆಯೇ ತಮ್ಮ ೨೧ನೇ ವರ್ಷದಲ್ಲಿ ಖಡ್ಗ ಹಿಡಿದು ಕನ್ನಡ ಶರಣರ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ಷಟಸ್ಥಲಜ್ಞಾನಿ ಎನಿಸಿದ್ದರು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ. ಬದುಕಿದ್ದು ಕೇವಲ ಇಪ್ಪತ್ತನಾಲ್ಕು ವರ್ಷಗಳು ಮಾತ್ರ. ಕೊನೆಗೆ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂದು ೧೨ನೇ ಶತಮಾನದ ಅಸಂಖ್ಯಾತ ಶರಣರಲ್ಲಿ ಪ್ರಮುಖರಾದ ಚನ್ನಬಸವಣ್ಣನವರ ಹಿರಿಮೆಯ ಕುರಿತು ಮಾಹಿತಿ ನೀಡಿದರು.
ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ.ಕೆ.ಪಾಟೀಲ, ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಆರ್.ಬಿರಾದಾರ, ಶಾಂತಪ್ಪ ಪಡನೂರ, ಗೊಲ್ಲಾಳ ಬಿರಾದಾರ, ಸಂಗನಗೌಡ ಪಾಟೀಲ, ಬಸವರಾಜ ದೊಡಮನಿ, ಕೆ.ಡಿ.ಕಟಗಿಗಾಣ, ಕುಲಂಕಾರ ಹಿಟ್ನಳ್ಳಿ ಇದ್ದರು.

