ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಹೋರಾಟ ಸಮಿತಿಯಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ :ವಿಜಯಪುರ ಜಿಲ್ಲಾ 371(ಜೆ ) ಹೋರಾಟ ಸಮಿತಿ ಮುಖಂಡರು ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದರು.
371(ಜೆ ) ಮೀಸಲಾತಿಯಿಂದ ವಿಜಯಪುರ ಜಿಲ್ಲೆಯನ್ನು ಕೈ ಬಿಟ್ಟಿದ್ದರಿಂದ ಜಿಲ್ಲೆಯ ಜನರಿಗೆ ದೊಡ್ಡ ಅನ್ಯಾಯವಾಗಿದೆ. ವಿಜಯಪುರ ಜಿಲ್ಲೆಗೆ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕು ಹಾಗೂ ಪ್ರಧಾನಮಂತ್ರಿಯವರ ಗಮನಕ್ಕೆ ತಂದು ಕೇಂದ್ರ ಸರಕಾರದಿಂದ ಸಂವಿಧಾನದ 371(ಜೆ ) ಗೆ ತಿದ್ದುಪಡಿ ಮಾಡಿ ವಿಜಯಪುರ ಜಿಲ್ಲೆಗೆ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಳೆದ 2010ರಿಂದ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ.ವಿಜಯಪುರ ಜಿಲ್ಲಾ 371(ಜೆ ) ಹೋರಾಟ ಸಮಿತಿ ಜಿಲ್ಲೆಯಲ್ಲಿ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದೆ ಎಂದು ಹೋರಾಟ ಸಮಿತಿ ಮುಖಂಡರು ಅಧ್ಯಕ್ಷರ ಗಮನಕ್ಕೆ ತಂದು ನ್ಯಾಯಯುತ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.
ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಯುವಕರಿಗೆ ನೇಮಕಾತಿಯಲ್ಲಿ ಮೀಸಲಾತಿ,ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುವ ವಿಶೇಷ ಅನುದಾನ ಸೌಲಭ್ಯ ಸೇರಿದಂತೆ ಜಿಲ್ಲೆಯ 25 ಲಕ್ಷ ಜನರ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನದ 371(ಜೆ) ಗೆ ತಿದ್ದುಪಡಿ ಮಾಡಿ ವಿಜಯಪುರ ಜಿಲ್ಲೆಯನ್ನು ಮೀಸಲಾತಿಯಡಿ ಸೇರಿಸಿ ಜಿಲ್ಲೆಯ ಸಮಸ್ತ ಜನರಿಗೆ ನ್ಯಾಯ ಒದಗಿಸಬೇಕೆಂದು ಹೋರಾಟಗಾರರು ಇದೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಬಿ ವೈ ವಿಜಯೇಂದ್ರ ಅವರು ಹೋರಾಟ ಸಮಿತಿ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೋರಾಟ ಸಮಿತಿ ಹಾಗೂ ಜಿಲ್ಲೆಯ ಸಮಸ್ತ ಜನರ ನ್ಯಾಯಯುತ ಬೇಡಿಕೆಯನ್ನು ಸರಕಾರದ ಗಮನಕ್ಕೆ ತಂದು ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಸುರೇಶ ಬಿರಾದಾರ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಈರಣ್ಣ ರಾವೂರ, 371(ಜೆ ) ಹೋರಾಟ ಸಮಿತಿಯ ಮುಖಂಡರಾದ ವಿನೋದ ಖೇಡ, ಲಾಯಪ್ಪ ಇಂಗಳೆ, ನ್ಯಾಯವಾದಿ ಎನ್ ಸುರೇಶಕುಮಾರ, ಅನಿಲ ಇಕ್ಕಡೆ, ಮಹಾದೇವಪ್ಪ ತೇಲಿ ಅರುಣಕುಮಾರ ತೇರದಾಳ, ಸಾಗರ ಸಾವಳಗಿ ಉಪಸ್ಥಿತರಿದ್ದರು.

