ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನೆ | ಶಾಸಕ ವಿಠ್ಠಲ ಕಟಕಧೋಂಡ ಭರವಸೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಹಾಗೂ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ, ಇಂಡಿ/ಚಡಚಣ ಇವರ ಸಹಯೋಗದಲ್ಲಿ ಚಡಚಣ ತಾಲೂಕಿನ ಧೂಳಖೇಡ–ಶಿರನಾಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಶುಕ್ರವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಶಿಕ್ಷಣವಂತರಾಗಬೇಕು ಎಂಬುದು ನಮ್ಮ ಗುರಿಯಾಗಿದೆ. ನನ್ನ ಅವಧಿಯಲ್ಲಿ ಈ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಇಂದು ನನ್ನ ಕೈಯಿಂದಲೇ ಉದ್ಘಾಟನೆ ಮಾಡುವ ಭಾಗ್ಯ ದೊರೆತಿರುವುದು ಸಂತೋಷದ ಸಂಗತಿ ಎಂದ ಅವರು, ಕ್ಷೇತ್ರದ ಪ್ರಮುಖ ರಸ್ತೆಗಳು ಹದಗೆಟ್ಟಿರುವುದನ್ನು ಗಮನಿಸಿದ್ದು, ಅವುಗಳ ದುರಸ್ತಿಗಾಗಿ ಸರ್ಕಾರದ ಗಮನ ಸೆಳೆಯಲಾಗಿದೆ. ರಸ್ತೆ ಕಾಮಗಾರಿಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ತರಲು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಚಡಚಣ ಪಟ್ಟಣಕ್ಕೆ 220 ಕೆ.ವಿ. ವಿದ್ಯುತ್ ಘಟಕ, ಈ ಭಾಗದಲ್ಲಿ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಚಡಚಣ ತಾಲೂಕಿಗೆ ಅಗತ್ಯವಿರುವ ಪ್ರಜಾಸೌಧ, ನ್ಯಾಯಾಲಯ, ಬಸ್ ನಿಲ್ದಾಣ ಹಾಗೂ ಕ್ರೀಡಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡ ಸುರೇಶಗೌಡ ಪಾಟೀಲ ಮಾತನಾಡಿ, 1995ರಲ್ಲಿ ಧೂಳಖೇಡ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ಆರಂಭವಾದ ವಸತಿ ನಿಲಯವು ಇಂದು ಬೃಹತ್ ಕಟ್ಟಡವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ. ಈ ಕಟ್ಟಡದಿಂದ 100 ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಉತ್ತಮ ವಸತಿ ಸೌಲಭ್ಯ ದೊರೆಯಲಿದ್ದು, ಅವರ ಶಿಕ್ಷಣಕ್ಕೆ ಸಹಕಾರಿಯಾಗಲಿದೆ, ಯಾವುದೆ ಅಹಿತಕರ ಘಟನೆ ಹಾಗೂ ಅಕ್ರಮಗಳಿಗೆ ಅವಕಾಶ ನೀಡದೆ ಒಳ್ಳೆಯ ಹೆಸರು ಬರುವಹಾಗೆ ನಡೆಯಿರಿಎಂದು ವಸತಿ ನಿಲಯದ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರವಿದಾಸ ಜಾಧವ, ತಾ.ಪಂ. ಎಇಒ ಅಶೋಕಕುಮಾರ ರಾಠೋಡ, ಸಾಹೇಬಗೌಡ ಪಾಟೀಲ, ಘೇಣುಬರಾಯಗೌಡ ಪಾಟೀಲ, ತೌಫಿಕ್ ಕುಡ್ಲೆ, ಶಿವಾನಂದ ಮಠ, ಸೋಮುಗೌಡ ಪಾಟೀಲ, ರಾಯಗೊಂಡ ರಗಟೆ, ಶಿವಾನಂದ ಧೂಳಖೇಡ, ಬಾಪುರಾಯ ಏಳೆಗಾಂವ, ದಿಲೀಪ ಶಿವಶರಣ, ಕಲ್ಲಪ್ಪ ಗುಮತೆ, ಶ್ರೀಶೈಲ ಹಳ್ಳಿ, ಗುರುರಾಜ ಕುಲಕರ್ಣಿ, ಮಹೇಶ ಸೋಲಕಂರ, ಅಶೋಕ ತಳವಾರ, ಸಂಗನಬಸವ ನಾಗಣಸೂರ, ಇಂಜಿನಿಯರ ಬಸವರಾಜ, ಲಕ್ಷ್ಮಣ ಕೊಟೆ ಸೇರಿದಂತೆ ಅನೇಕರಿದ್ದರು.

