ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ನೇಹಿತರನ್ನು ಖುಷಿ ಪಡಿಸಲು ನಾರಾಯಣಪೂರ ಜಲಾಶಯದಿಂದ ಪರೋಕ್ಷವಾಗಿ ನೀರು ಹರಿಸಲು ಮೌಖಿಕವಾಗಿ ಆದೇಶ ಹೊರಡಿಸಿರುವುದು
ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿಗಳು ನಮ್ಮ ಮುಖ್ಯಮಂತ್ರಿಗಳ ಆಪ್ತ ಸ್ನೇಹಿತರು, ಬಿಸಿನೆಸ್ ಇಂಟ್ರಸ್ಟ್ ಸಹ ನಮ್ಮ ಮುಖ್ಯಮಂತ್ರಿಗಳಿಗೆ ಇದೆ, ಹೀಗಾಗಿ ತಮ್ಮ ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ ಹಾಗೂ ಸ್ನೇಹಿತನನ್ನು ಖುಷಿಪಡಿಸಲು ನೀರು ಹರಿಸುವುದು ಅಕ್ಷಮ್ಯ ಅಪರಾಧ, ನಮ್ಮ ರೈತರಿಗೆ ನೀರಿಲ್ಲ, ಆದರೂ ಈ ರೀತಿ ನೀರು ಹರಿಸುವುದು ಬೇಜವಾಬ್ದಾರಿತನದ ಲಕ್ಷಣ ಎಂದರು.
ಈ ಹಿಂದೆ ರಾಹುಲ್ ಗಾಂಧಿ ಖುಷಿಪಡಿಸಲು ಕೇರಳಕ್ಕೆ ನೆರವು ನೀಡಲಾಯಿತು, ಈಗ ನಮ್ಮ ರಾಜ್ಯದ ರೈತರಿಗೆ ನೀರಿಲ್ಲ, ಆದರೆ ತಮ್ಮ ಸ್ನೇಹಿತರಿಗೆ ಖುಷಿ ಪಡಿಸಲು ನಮ್ಮ ನೀರನ್ನು ಹರಿಸಲಾಗುತ್ತಿದೆ ಎಂದರು.
ಮಹಾ ಮಾದರಿಯಲ್ಲಿ ರೈತರ ಸಾಲಮನ್ನಾ ಮಾಡಿ
ಭೀಕರ ಬರದ ವೇಳೆ ರಾಜ್ಯ ಸರ್ಕಾರದ ಅಭಯವಿಲ್ಲದ ಕಾರಣ ಅನ್ನದಾತ ಆತ್ಮಸ್ಥೈರ್ಯ ಕಳೆದುಕೊಂಡು ರೈತ ಆತ್ಮಹತ್ಯೆ ದಾರಿ ತುಳಿಯುವಂತಾಗಿದೆ, ಒಂದು ರೈತ ಕುಟುಂಬಕ್ಕೆ ಕೇವಲ ೨೫೦೦ ರೂ. ಭೀಕ್ಷೆ ನೀಡಿದ ರೀತಿಯಲ್ಲಿ ನೀಡುವ ನಿರ್ಧಾರ ಕೈಗೊಂಡಿರುವುದು ನಾಚಿಕೆಗೇಡು, ವಿಶೇಷ ಅಧಿವೇಶನದಲ್ಲಿ ಸಾಲಮನ್ನಾಗೆ ನಾವು ಗೋಗೆರೆದರೂ ಸಹ ಕೇಳಲಿಲ್ಲ ಎಂದು ಅಸಮಾಧಾನ ಹೊರಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡಲೇ ಮಹಾರಾಷ್ಟ್ರ ಮಾದರಿಯಲ್ಲಿ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರ ಸರ್ಕಾರ ಈಗಾಗಲೇ ೨ ಲಕ್ಷ ರೂ. ಸಾಲಮನ್ನಾ ಮಾಡಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ, ಆದರೆ ನಮ್ಮ ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಪ್ರಾಜೆಕ್ಟ್, ಟೌನಶಿಫ್ ಬಗ್ಗೆ ಆಸಕ್ತಿ ಇದೆ ಹೊರತು ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಬಲವಂತದ ಸಾಲ ವಸೂಲಾತಿ ಮಾಡಬೇಡಿ ಎಂದು ಹೇಳಿದರೂ ಸಹ ಅನೇಕ ಬ್ಯಾಂಕುಗಳು ಸಾಲ ಪಾವತಿಗೆ ರೈತರಿಗೆ ನೋಟಿಸ್ ನೀಡಿವೆ, ಆ ಮೂಲಕ ರಾಜ್ಯದ ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ ಎಂದರು.
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಐದು ಲಕ್ಷ ರೂ.ಗಳವರೆಗೆ ರೈತರ ಕೃಷಿ ಸಾಲ ಮನ್ನಾ, ಪ್ರತಿ ಹೆಕ್ಟೇರ್ ಗೆ ರಾಜ್ಯ ಸರ್ಕಾರ ೫೦ ಸಾವಿರ ರೂ. ಪರಿಹಾರ ನೀಡಬೇಕು ಎಂದರು.
ಒಂದೂವರೆ ಲಕ್ಷ ಖಾಲಿ ಹುದ್ದೆ ಭರ್ತಿ ಮಾಡುವುದಾಗಿ ಹೇಳಿದ ರಾಜ್ಯ ಸರ್ಕಾರ ಒಂದೂವರೆ ಸಾವಿರ ಉದ್ಯೋಗಳನ್ನು ಭರ್ತಿ ಮಾಡದೇ ಯುವಜನತೆ ಬದುಕಿನೊಂದಿಗೆ ಚೆಲ್ಲಾಟವಾಡುವ ಮೂಲಕ ಯುವಕರನ್ನು ಧಂಗೆ ಏಳುವ ಪರಿಸ್ಥಿತಿ ಸೃಜಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವಿಜುಗೌಡ ಪಾಟೀಲ, ಅರುಣ ಶಹಾಪೂರ, ಪರಶುರಾಮಸಿಂಗ್ ರಜಪೂತ, ರಮೇಶ ಬಿದನೂರ, ಸಂಜೀವ ಐಹೊಳಿ, ಕಾಸುಗೌಡ ಬಿರಾದಾರ, ಡಾ.ಸುರೇಶ ಬಿರಾದಾರ, ಶಂಕರಗೌಡ ಪಾಟೀಲ, ಸಾಬು ಮಾಶ್ಯಾಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಾಕ್ಸ್ ೧
ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ
ಸಾರಿಗೆ ಇಲಾಖೆಯ ಬಸ್ ಗಳು ಡಿಪೋದಲ್ಲಿ ನಿಂತಿವೆ, ಡಿಸೈಲ್ ಹಣವನ್ನು ಆಯಾ ಆಯಿಲ್ ಕಂಪನಿಗಳಿಗೆ ಈ ಸರ್ಕಾರ ಹಣವನ್ನೇ ಪಾವತಿಸಿಲ್ಲ, ಹೀಗಾಗಿ ಬಸ್ ವ್ಯತ್ಯಯವಾಗುತ್ತಿವೆ, ಒಂದರ್ಥದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ಆರ್ಥಿಕ ತುರ್ತು ಪರಿಸ್ಥಿತಿಯನ್ನು ರಾಜ್ಯ ಎದುರಿಸುತ್ತಿದೆ, ಆದರೆ ಇದನ್ನು ಮರೆಮಾಚಲು ದಿಕ್ಕು ತಪ್ಪಿಸುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
೯ ಲಕ್ಷ ರೂ. ಸಾಲದ ಹೊರೆಯಿಂದಾಗಿ ಅದನ್ನು ಸರಿದೂಗಿಸಲು ಅಬಕಾರಿಗೆ ಇಲಾಖೆಗೆ ಟಾರ್ಗೆಟ್ ನೀಡಲಾಗಿದೆ, ಮಾದಕ ದ್ರವ್ಯ ಅವ್ಯಾಹತವಾಗಿದ್ದು ನಮ್ಮ ರಾಜ್ಯ ಉಡ್ತಾ ಪಂಜಾಬ್ ಆಗಿದೆ ಎಂದರು.
ಬಾಕ್ಸ್ ೨
ಎಸ್‌ಐಆರ್ ಬಗ್ಗೆ ಆಕ್ಷೇಪಿಸಿದ ಕಾರ್ಪೋರೇಟರ್‌ಗಳು ನಾಲಾಯಕರು
ವಿಜಯಪುರ: ಎಸ್.ಐ.ಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ, ಅದು ಸರ್ಮಪರ್ಕವಾಗಿ ನಡೆದಿಲ್ಲ ಎಂದು ಹೇಳಿರುವ ಕಾರ್ಪೋರೆಟ್ ಗಳು ನಾಲಾಯಕರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿಮ್ಮ ಪಾಲಿಕೆ ಸದಸ್ಯರೇ ಎಸ್.ಐ.ಆರ್. ಬಗ್ಗೆ ದೂರಿದ್ದಾರೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾರು ಹೇಳಿದ್ದಾರೋ ಅವರು ನಾಲಾಯಕರು, ಅವರಿಗೆ ಮಾಹಿತಿ ಇದ್ದಂತಿಲ್ಲ, ಅವರು ಯಾರು ಹೇಳಿದ್ದಾರೆ ಎಂಬುದರ ಕುರಿತು ವರದಿ ತರಿಸಿಕೊಳ್ಳುವೆ ಎಂದರು.
ಭಾರತೀಯ ಜನತಾ ಪಕ್ಷದಲ್ಲಿ ಅಸಮಾಧಾನ ಇಲ್ಲ ಎಂದು ಹೇಳುವುದಿಲ್ಲ, ಕೆಲವೊಂದು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರುವುದು ಸತ್ಯ, ಈ ಕಾರಣಕ್ಕಾಗಿ ಅದರ ಬಗ್ಗೆ ಸೂಕ್ತ ರೀತಿಯಲ್ಲಿ ಚರ್ಚೆ ನಡೆಸುವೆ, ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

