ಉದಯರಶ್ಮಿ ದಿನಪತ್ರಿಕೆ
ಅಥಣಿ: ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳ ಕುರಿತು ಸಲ್ಲಿಸುವ ಪ್ರತಿ ಅರ್ಜಿಗೆ ಸ್ವೀಕೃತಿ ಸಂಖ್ಯೆ ನೀಡಿ, ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಡ್ ೨ ತಹಶೀಲ್ದಾರ ಮಹಾದೇವ ಬಿರಾದಾರ ತಿಳಿಸಿದರು.
ಅವರು ನದಿ ಇಂಗಳಗಾಂವ ಗ್ರಾಮದ ನಂದಿ ಬಸವೇಶ್ವರ ಸಭಾ ಭವನದಲ್ಲಿ ಶನಿವಾರ ನಡೆದ ಪ್ರಜಾಸೇವೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಂದೋಲನವು ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿದ್ದು ಸಾರ್ವಜನಿಕರು ದಾಖಲೆ ಸಮೇತ ಅರ್ಜಿ ನೀಡಿ ಸಭೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು ಸಭೆಯಲ್ಲಿ 20 ಜನರು ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಹದಗೆಟ್ಟಿರುವ ತೋಟದ ವಸತಿ ರಸ್ತೆಗಳನ್ನು ದುರಸ್ತಿ ಮಾಡಿ ಉತ್ತಮ ರಸ್ತೆ ನಿರ್ಮಿಸಬೇಕು ತೋಟದಲ್ಲಿರುವ ಮನೆಗಳನ್ನು ಗ್ರಾಮ ಪಂಚಾಯತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಸ್ಮಶಾನಕ್ಕೆ ಅಗತ್ಯ ಜಾಗ ಕಲ್ಪಿಸಬೇಕು, ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ನೀಡಬೇಕು, ಕೃಷ್ಣಾ ನದಿ ದಡದಿಂದ ದಡಕ್ಕೆ ಸಾರ್ವಜನಿಕರಿಗಾಗಿ ಬೋಟ್ ವ್ಯವಸ್ಥೆ ಕಲ್ಪಿಸಬೇಕು, ಅಲ್ಲದೇ ತೋಟದ ವಸತಿ ಪ್ರದೇಶಗಳಿಗೂ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು, ರಸ್ತೆ ಬದಿಯಲ್ಲಿ ಮುಚ್ಚಿ ಹೋಗಿರುವ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಮಗದುಮ್, ಸಿದ್ದು ಲಾಂಡಗೆ, ಮಹಾಂತೇಶ ಬಂಡಗಾರ, ಗುರುರಾಜ ಸಂಪನ್ನವರ, ಪ್ರವೀಣ ಹುಣಸಿಕಟ್ಟಿ, ಲಕ್ಷ್ಮಣ ಜಾಧವ, ಮಲ್ಲಪ್ಪ ಮುಂಜೆ, ಸಂತೋಷ ಬಾಯನಾಯಿಕ, ಸಂತೋಷ ತಾಲಬೌಡಿ, ಚೇತನ ಗುರವ ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು ಗ್ರಾ.ಪಂ ಪಿಡಿಓ ಸಚಿನ ಪಾಟೀಲ ಸ್ವಾಗತಿಸಿದರು, ಶಿಕ್ಷಕ ಮಹಾಂತೇಶ ಗೂಳಪ್ಪನ್ನವರ ನಿರೂಪಿಸಿ ವಂದಿಸಿದರು.

