ಆಲಮೇಲ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಿಸಿದೆ ಎಂದು ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ ಹೇಳಿದರು.
ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಮಕ್ಕಳ ಚಟುವಟಿಕೆಗಳನ್ನು ಪರಿಗಣಿಸಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಗಾಗಿ ಶಾಲೆಯ ಅಭಿವೃದ್ಧಿ ಗಾಗಿ ನಾವೀನ್ಯತೆಯ ಚಟುವಟಿಕೆಗಳನ್ನು ಅಳವಡಿಸಿಕೊಂಡು ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರ ಸಹಕಾರದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಬಾಲಭಾರತಿ ಶಾಲೆಯು ಮೊದಲಿನಿಂದಲೂ ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದ್ದು. ಜಿಲ್ಲೆಯಲ್ಲಿಯೇ ಡಿಜಿಟಲ್ ತರಗತಿಗಳ ಮುಖಾಂತರ ಬೋಧನೆ ಅಳವಡಿಸಿಕೊಂಡು ಇತರೆ ಶಾಲೆಗಳಿಗೆ ಮಾದರಿಯಾಗಿದೆ. ಹಾಗಾಗಿ ಈ ಶಾಲೆಯ ಶಿಕ್ಷಕರಿಗೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರು ಒಬ್ಬ ದಕ್ಷ ಆಡಳಿತಗಾರ,ಸದಾಕಾಲವೂ ಶಿಕ್ಷಕರು ಹಾಗೂ ಮಕ್ಕಳ ಜೊತೆಗೆ ಬೆರೆತು ಒಂದಿಲ್ಲಾ ಒಂದು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡುತ್ತಾ ಕ್ರೀಯಾಶೀಲರಾಗಿರುತ್ತಾರೆ.ಅಂತೆಯೇ ಅವರಿಗೆ ಹಲವಾರು ಪ್ರಶಸ್ತಿಗಳು ಅರಿಸಿ ಬಂದಿವೆ ಎಂದು ಶ್ಲಾಘಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಐಶ್ವರ್ಯ ಬೇಪಾರಿ, ಅಂಜಲಿ ಕನ್ನೊಳ್ಳಿ ಮುಂತಾದವರು ಇದ್ದರು.

