ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬದಲಾಗುತ್ತಿರುವ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಶಿಕ್ಷಕರು ವಿಷಯ ಜ್ಞಾನದ ಜತೆಗೆ ಕೌಶಲ್ಯ, ತಂತ್ರಜ್ಞಾನ ಬಳಕೆ ಹಾಗೂ ಕಾರ್ಯಕ್ಷಮತೆಯನ್ನು ಬೆಳೆಸಿಕೊಳ್ಳಬೇಕು ಎಂದು ಮುಖ್ಯ ಅತಿಥಿ ಪ್ರೊ. ಜಿ.ಆರ್. ಅಂಗಡಿ ಹೇಳಿದರು.
ನಗರದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ 2024–25ನೇ ಸಾಲಿನ ಬಿ.ಎಡ್ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಕಾಲಕ್ಕೆ ತಕ್ಕಂತೆ ಜ್ಞಾನವನ್ನು ನವೀಕರಿಸಿಕೊಳ್ಳಬೇಕು. ಹಾರ್ಡ್‌ವರ್ಕ್‌ನ ಜತೆಗೆ ಸ್ಮಾರ್ಟ್‌ವರ್ಕ್‌ಗೆ ಆದ್ಯತೆ ನೀಡಿ, ಡಿಜಿಟಲ್ ಸಂಪನ್ಮೂಲ ಹಾಗೂ ಆಧುನಿಕ ಬೋಧನಾ ವಿಧಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಂವಹನ, ಸೃಜನಶೀಲತೆ, ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಉದ್ಯೋಗಾವಕಾಶಗಳಿಗೂ ಸಹಕಾರಿಯಾಗುತ್ತದೆ ಎಂದರು.
ಗುರುಕುಲ ಭಾಸ್ಕರ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ; ಅದು ಸಮಾಜ ನಿರ್ಮಾಣದ ಜವಾಬ್ದಾರಿಯುತ ಸೇವೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಸ್ಕಾರ, ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಬಿ.ಎಡ್ ಶಿಕ್ಷಣ ಪೂರ್ಣಗೊಳಿಸಿದ ನಂತರವೂ ವಿದ್ಯಾರ್ಥಿಗಳು ಮಹಾವಿದ್ಯಾಲಯ ಹಾಗೂ ಸಂಸ್ಥೆಯೊಂದಿಗಿನ ಬಾಂಧವ್ಯವನ್ನು ಮುಂದುವರಿಸಬೇಕು. ಮುಂದೆ ಎಲ್ಲೇ ಕೆಲಸ ಮಾಡಿದರೂ ‘ನಾನು ಈ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ’ ಎಂಬ ಭಾವನೆ ಹೊಂದಿರಬೇಕು. ಸಂಸ್ಥೆಯೊಂದಿಗಿನ ಸ್ನೇಹ ಮತ್ತು ಒಡನಾಟ ಜೀವನದುದ್ದಕ್ಕೂ ಉಳಿಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಶೋಕ ವಾರದ ಮಾತನಾಡಿ, ಪೂಜ್ಯರ ಪ್ರಯತ್ನದಿಂದ ಸ್ಥಾಪನೆಯಾದ ಸಂಸ್ಥೆ ಕಳೆದ 20 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ತನ್ನದೇ ಹೆಸರನ್ನು ಉಳಿಸಿಕೊಂಡಿದೆ. ವಿದ್ಯಾರ್ಥಿಗಳು ಇಲ್ಲಿ ಪಡೆದ ಜ್ಞಾನ ಹಾಗೂ ಅನುಭವವನ್ನು ವೃತ್ತಿ ಜೀವನದಲ್ಲಿ ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಕರಾಗಬೇಕು ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಾಚಾರ್ಯೆ ಡಾ. ಜೆ.ಸಿ.ನಂದಿಕೋಲ, ದಾನಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಕು.ವರುಣ ಕಾಂಚಗಾರ ಇದ್ದರು.
ಡಾ.ಶರಣಬಸವ ಜೋಗುರ, ಸುಧಾಕರ ಚವ್ಹಾಣ,ಪ್ರಶಾಂತ ಕುಲಕರ್ಣಿ, ಆರ್.ಎ. ಹಾಲಕೇರಿ, ಭಾಗ್ಯಜ್ಯೋತಿ ದಸ್ಮಾ, ನಾಜಿಯಾ ಮುಲ್ಲಾ, ಚನ್ನಬಸವ ಕತ್ತಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

