ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 13 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2026 ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಲಾದ ಪ್ರೊಮೊ ರನ್ ನಲ್ಲಿ ವಿವಿಧ ವೇಷಭೂಷಣಗಳಲ್ಲಿ ಓಟ ಪೂರ್ಣಗೋಳಿಸಿದ ಮಹಿಳೆಯರನ್ನು ಗುರುತಿಸಲಾಗಿದ್ದು ಅವರಿಗೆ ಅಭಿನಂದಿಸಲಾಗುವುದು.
ರವಿವಾರ ನಡೆದ ಪ್ರೊಮೊ ರನ್ ನಲ್ಲಿ ಬಾಲಕಿಯರು, ಯುವತಿಯರು, ಮಹಿಳೆಯರು ಸೇರಿದಂತೆ ನಾನಾ ವಯೋಮಾನದ ಹೆಣ್ಣು ಮಕ್ಕಳು ತರಹೇವಾರಿ ವೇಷಭೂಷಣ ಧರಿಸಿ ಪಾಲ್ಗೊಂಡಿದ್ದರು.
ಮರಾಠಿ ಸಂಪ್ರದಾಯದ ಸೀರೆ, ನಾಗಾಲ್ಯಾಂಡ್ ವಾಸಿಗಳ ದಿರಿಸು, ಕಚ್ಚೆ ಕಟ್ಟಿಕೊಂಡು, ಆದಿವಾಸಿಗಳ ಉಡುಗೆ ಧರಿಸಿ, ಆಧುನಿಕ ಬಟ್ಟೆ ಹಾಕಿಕೊಂಡು, ಟೊಂಕದಲ್ಲಿ ಡಾಬು, ಮೂಗಲ್ಲಿ ನತ್ತು ಧರಿಸಿ ನಾನಾ ಬಣ್ಣಗಳಲ್ಲಿನ ಸೀರೆ ಮತ್ತು ಅದರ ಮೇಲೆ ಕೂಲಿಂಗ್ ಗ್ಲಾಸ್‌ಗಳನ್ನು ಹಾಕಿಕೊಂಡು ಓಡುವ ಮೂಲಕ ವಿವಿಧತೆ ಮೆರೆದರು.
ಹೀಗೆ ಓಟದಲ್ಲಿ ಪಾಲ್ಗೊಂಡವರನ್ನು ಪರಿಗಣಿಸಿ ಅವರಲ್ಲಿ ಅತ್ಯುತ್ತಮ ವೇಷ ಧರಿಸಿದವರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆದಾರರು ಒಟ್ಟು ಆರು ಜನ ಮಹಿಳೆಯರು ಮತ್ತು ಒಂದು ತಂಡವನ್ನು ಆಯ್ಕೆ ಮಾಡಿದ್ದಾರೆ.

ಪ್ರೊಮೊ ರನ್ ವಿಜೇತರು
ವೃಕ್ಷದ ಬಟ್ಟೆ ಧರಿಸಿದ ಬಶೀರಾ ದೇಸಾಯಿ, ಮಹಾರಾಷ್ಟ್ರ ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದ ಐಶ್ವರ್ಯಾರಾಣಿ ತಾಳಿಕೋಟಿ, ಅಶ್ವಿನಿ ಜೇವೂರ, ಭೀಮಾ ಬಸನಾಳ, ಪ್ರೀಯಾ ಭೀಮಸನೂರ, ಗೀತಾ ಪಡಿಕರ ಮತ್ತು ಫ್ಯಾನ್ಸಿ ಡ್ರೆಸ್ ನಲ್ಲಿ ಸ್ಮಿತಾ ಪಾಟೀಲ ಹಾಗೂ ಸ್ನೇಹಾ ಪಾಟೀಲ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುವುದು. ಸುಕುನ ಮಹಿಳಾ ಗುಂಪಿನಲ್ಲಿ ಕಾಣಿಸಿಕೊಂಡ ವಿದ್ಯಾ, ಸುಚಿತಾ ಶೆಟ್ಟಿ, ಧನುಶ್ರೀ, ಭಾಗ್ಯಶ್ರೀ ಪಾಟೀಲ, ರೂಪಾ ಸಿಂದಗಿಕರ ಅವರು ಒಳಗೊಂಡ ಮಹಿಳಾ ಗುಂಪನ್ನು ವಿಶೇಷ ಮಹಿಳಾ ಗುಂಪು ಎಂದು ಅಭಿನಂದನಾ ಪತ್ರ ನೀಡಲಾಗುವುದು.
ಈ ಪ್ರೊಮೊ ರನ್ ಈಗಾಗಲೇ ನಗರಾದ್ಯಂತ ಈ ಬಾರಿಯ ವೃಕ್ಷಥಾನ್ ಹೆರಿಟೆಜ್ ರನ್ ಕುರಿತು ಹವಾ ಸೃಷ್ಟಿಸಿದೆ. ಅಷ್ಟೇ ಅಲ್ಲ ನೋಂದಣಿಯಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಲು ಪ್ರೋತ್ಸಾಹ ನೀಡಿದೆ ಎಂದು ಸಂಘಟಕರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

