ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗಡಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಶನಿವಾರ ತಿಕೋಟಾ ತಾಲೂಕಿನ ಯತ್ನಾಳ ಗ್ರಾಮದಲ್ಲಿ ರೂ. 5 ಕೋ. ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಯತ್ನಾಳ-ಜಾಲಗೇರಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯತ್ನಾಳ ಗ್ರಾಮದಿಂದ ಮಹಾರಾಷ್ಟ್ರದ ಗಡಿ ಭಾಗದ ವರೆಗಿನ ರಸ್ತೆ ಕಾಮಗಾರಿಗೆ ರೂ.5 ಕೋ. ಅನುದಾನ ಮಂಜೂರಾಗಿದ್ದು, ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಇಟ್ಟಂಗಿಹಾಳದಿಂದ ಯತ್ನಾಳ ಗ್ರಾಮದವರೆಗೆ ಎಸ್.ಎಚ್.ಡಿ.ಪಿ ಯೋಜನೆಯಡಿ ರೂ. 25 ಕೋ. ವೆಚ್ಚದ ರಸ್ತೆ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದ ಅವರು, ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದರು.
ಗಡಿ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇದು ಗಡಿಯ ಕೊನೆ ಭಾಗವಾಗಿರುವುದರಿಂದ ನೀರಿಗೆ ಅಡೆತಡೆಯಾಗುವುದು ಸಹಜ. ಮೇಲ್ಭಾಗ ಮತ್ತು ಕೆಳ ಭಾಗದ ರೈತರು ಸಹಕಾರದಿಂದ ನೀರನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ ಗ್ರಾಮಗಳಿಗೆ ಆಗಿರುವ ಅನ್ಯಾಯವನ್ನು ಮುಂದಿನ ದಿನಗಳಲ್ಲಿ ಸರಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜುಗೌಡ ಪಾಟೀಲ, ಸುರೇಶಗೌಡ ಪಾಟೀಲ, ಸುನೀಲಗೌಡ ಪಾಟೀಲ, ಸೋಮನಿಂಗ ಕೋರಿ, ಭೂತಾಳಸಿದ್ದ ಒಡೆಯರ, ಓಗೆಪ್ಪ ಗೋಪಣೆ, ರಾಜಶೇಖರ ಪವಾರ, ಗುರುಪಾದಗೌಡ ದಾಶ್ಯಾಳ, ಗೀತಾಂಜಲಿ ಪಾಟೀಲ, ರಾಘವೇಂದ್ರ ಕುಲಕರ್ಣಿ, ಈರನಗೌಡ ಬಿರಾದಾರ, ಲೋಕೋಪಯೋಗಿ ಇಲಾಖೆಯ ರವಿ ಪವಾರ ಸೇರಿದಂತೆ ಯತ್ನಾಳ ಜಾಲಗೇರಿ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

