ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪ್ರೀತಿಯ ಸುಧಾ,
ಹೇಳಿ ಕೇಳಿ ನೀನು ಮಾದಕ ಕಂಗಳ ಚೆಲುವೆ. ಬಲಗೆನ್ನೆಯ ಮೇಲಿರುವ ಗುಳಿಯೇ ನಿನಗೆ ಒಡವೆ. ನಿನ್ನಂತಹ ಮಂದಗಮನೆಯ ಮಂದಹಾಸ ನೋಡಲು ಸಿಗುವುದು ಅಪರೂಪವೆ. ನಿನ್ನ ರೂಪವೂ ಅಪರೂಪ. ಧೃಢತೆಯೂ ಅಪರೂಪ. ಅಂದದ ಮುಖಾರವಿಂದ, ನೀಳವಾದ ಕೇಶರಾಶಿ, ತಂಗಾಳಿಯೊಂದಿಗೆ ಆಟವಾಡುವ ದುಂಬಿಯಂತಹ ಮುಂಗುರುಳು, ಗುಲಾಬಿ ಬಣ್ಣದ ಅಧರಗಳಲ್ಲಿ ಅಚ್ಚಮಲ್ಲಿಗೆಯಂತಹ ಶುಭ್ರ ನಗು,ಚಂದನದ ಸುಗಂಧ ಬೀರುವ ಸುಂದರ ಯೌವ್ವನ ತುಂಬಿದ ಒಡಲು. ಅಂಗಾಂಗ ಸೌಂದರ್ಯವಂತೂ ಕವಿ ಕಾಳಿದಾಸನೂ ವರ್ಣಿಸಲಾಗದೆಂದು ಸೋಲುವನು. ಚೆಲುವಿನ ಸಾಗರ ನೀನು. ಬಿಂದು ನಾನು ಅನ್ನುತ್ತಿತ್ತು ಮನಸ್ಸು. ರಗಳೆ ರಂಪಗಳು ಗೊತ್ತಿಲ್ಲ. ಮಾನ ಸಮ್ಮಾನ ಉಳಿಸುವ ಬೆಳೆಸುವ ಕಲೆ ನಿನಗೆ ಚೆನ್ನಾಗಿ ಗೊತ್ತು. ಬೆಟ್ಟದಂತಹ ಅಡಚಣೆ ಬಂದರೂ ಸಲೀಸಾಗಿ ಬಿಡಿಸುವುದನ್ನು ಕರಗತ ಮಾಡಿಕೊಂಡಿರುವ ಚೆಲುವೆ. ಸೌಂದರ್ಯಸಾರದಂತೆ ಕಾಣುವವಳು. ಮನ್ಮಥನ ಹೂಬಾಣವನು ಸೀದಾ ಎದೆಗೆ ಬಿಟ್ಟವಳು. ನಿನ್ನ ನೆನೆಯುವುದು ಪುಳಕ ತರುವುದು. ನೀ ಮುಡಿಯದ ಹೂವಿನಲ್ಲಿ ಕಂಪಿಲ್ಲ. ನಾನೇನು ಸುರಸುಂದರಾಂಗನಲ್ಲ ನಿನ್ನ ಅನುರಾಗ ಬಯಸುವ ಪ್ರಿಯ ನಲ್ಲ. ನನ್ನ ನಿನ್ನ ಸಂಬಂಧ ಜಾತಿ ಮತ ಪಂಥ ಕೇಳದ ಅನುಬಂಧ. ಆ ದೈವ ಬೆಸೆದ ಬಂಧ.
ಮೊದಲ ಸಲ ನಿನ್ನ ನೋಡಿದ ದಿನ ಇನ್ನೂ ಕಣ್ಮುಂದಿದೆ. ಕಾಲೇಜಿನ ಉದ್ಯಾನವನದ ಹಸಿರು ಹಾಸಿನ ಮೇಲೆ ನೀನು ನಿನ್ನ ಗೆಳತಿಯರೊಂದಿಗೆ ಕುಳಿತು ಹರಟುತ್ತಿದ್ದೆ. ಇದ್ದಕ್ಕಿದ್ದಂತೆ ಫೊನ್ ರಿಂಗಣಿಸಿತು. ಮಾತನಾಡುತ್ತ ಎದ್ದು ನಿಂತು ಗೆಳತಿಯರಿಗೆ ಬೈ ಹೇಳಿ ನೀನು ಹೊರಟಿದ್ದೆ. ಆಗಲೇ ನನ್ನ ನಿನ್ನ ಮುಖಾಮುಖಿಯಾಯಿತು. ಅವಸರದಲ್ಲಿದ್ದರೂ ತಂಗಾಳಿಗೆ ತೂಗುತ್ತಿದ್ದ ಮರದ ನೆರಳಿನಲ್ಲಿ ನಿನ್ನತ್ತ ನೋಡುತ್ತ ನಿಂತಿದ್ದ ನನ್ನತ್ತ ನೋಡಿದೆ. ಆಗಲೇ ಇಬ್ಬರ ಕಣ್ಣುಗಳು ಮೊದಲ ಬಾರಿಗೆ ಸಂಧಿಸಿದವು. ನನ್ನ ಆಪ್ತ ಗೆಳೆಯರ ಪ್ರಕಾರ ನೀನು ಯಾವ ಹುಡುಗರನ್ನು ಕಣ್ಣೆತ್ತಿ ನೋಡುವವಳಲ್ಲ. ತುಟಿಗಳು ಮೌನವಾಗಿದ್ದರೂ ಕಣ್ಣುಗಳಲ್ಲೇ ಪ್ರೀತಿಯ ಭಾವ ವಿನಿಮಯ ನಡೆದುಹೋಯಿತು. ನಿನ್ನ ತುಟಿಯಂಚಿನ ಸಣ್ಣ ನಗು ನನ್ನ ಹೃದಯದ ಬಡಿತವನ್ನು ಏರಿಸಿತು. ನನ್ನ ಹೃದಯದಲ್ಲಿ ಪ್ರೀತಿಯ ಹೊಸ ಕಾವ್ಯವೊಂದು ಶುರುವಾಯಿತು. ಕಾಲೇಜಿನ ಗದ್ದಲದ ನಡುವೆಯೂ ನಮ್ಮಿಬ್ಬರಿಗೆ ಮಾತ್ರ ಸಮಯ ಸ್ತಬ್ಧವಾದಂತೆ ಭಾಸವಾಯಿತು. ಉಳಿದವರನ್ನು ಗಮನಿಸದಷ್ಟು ನಮ್ಮಿಬ್ಬರ ಗಮನ ಒಬ್ಬರ ಮೇಲೊಬ್ಬರ ಭಾವನೆಗಳಲ್ಲಿ ಮಿಂದೇಳುತ್ತಿತ್ತು. ನಾವು ಇನ್ಮುಂದೆ ಅಮರ ಪ್ರೇಮಿಗಳು ಎಂದು ಮನಸ್ಸುಗಳು ಹೇಳುತ್ತಿದ್ದವು. ಪಾರ್ಕಿನ ಈ ನೋಟ ನೋಡ ನೋಡುತ್ತಿದ್ದಂತೆ ಕಾಲೇಜಿನ ಕ್ಯಾಂಟೀನಿಗೆ ಯಾವಾಗ ಶಿಫ್ಟ್ ಆಯಿತೋ ತಿಳಿಯಲೇ ಇಲ್ಲ. ಬೈಟು ಚಹಾ ನೆಪದಲ್ಲಿ ಗಂಟೆಗಟ್ಟಲೇ ಹರಟೆ ನಡೆಯುತ್ತಿತ್ತು.

ಮಾತುಕತೆಯಲ್ಲಿ ಸ್ನೇಹ ಮುಂದುವರೆದರೂ ಪ್ರೀತಿಯನ್ನು ಅಭಿವ್ಯಕ್ತಿಸಲು ದಿನ ರಾತ್ರಿ ರಿಹರ್ಸಲ್ ನಡೆಸಿ ಇಂದು ಹೇಳಿಬಿಡಬೇಕೆಂದು ತಯಾರಾಗುತ್ತಿದ್ದೆ. ಆದರೆ ಧೈರ್ಯ ಸಾಲುತ್ತಲೇ ಇರಲಿಲ್ಲ. ಕೊನೆಗೊಂದು ದಿನ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಕೈಯಲ್ಲಿದ್ದ ಕೆಂಗುಲಾಬಿಯನ್ನು ಬೆನ್ನ ಹಿಂದೆ ಹಿಡಿದು ನಿನ್ನ ಮುಂದೆ ನಿಂತಿದ್ದೆ. ನೀನು ಇನ್ನೇನು ಮಾತನಾಡಲು ಬಾಯಿ ತೆರೆಯಬೇಕೆನ್ನುವಷ್ಟರಲ್ಲಿ ಮೊಣಕಾಲೂರಿ, ‘ನಿನ್ನ ಒಂದು ನಗುವಿಗೆ ನನ್ನ ಹೃದಯವನ್ನೇ ಕಳೆದುಕೊಂಡೆ. ಈ ಜೀವನದ ಹಾದಿಯಲ್ಲಿ ನನ್ನ ಜೊತೆಗಾತಿಯಾಗಿ ನನ್ನ ಜೊತೆ ಜೊತೆ ಹೆಜ್ಜೆ ಹಾಕುತ್ತಿಯಾ? ನಿನ್ನ ಹೃದಯದಲ್ಲಿ ಜೀವನಪೂರ್ತಿ ಇರೋಕೆ ಪುಟ್ಟ ಸ್ಥಾನ ಸಿಗುತ್ತಾ? ನಿನ್ನನ್ನ ಕಣ್ರೆಪ್ಪೆಯಲ್ಲಿಟ್ಟು ಕಾಯ್ತಿನಿ ಎನ್ನುತ್ತ ಕೆಂಗುಲಾಬಿಯನ್ನು ನೀಡಲು ಮುಂದಾದೆ.’ ‘ಕಾಲೇಜಿನ ಕೊನೆಯ ದಿನಗಳಲ್ಲಿ ನಿನ್ನೊಂದಿಗಿನ ಗೆಳೆತನ ನನ್ನ ಬದುಕಿಗೆ ಇಂಥ ಚೆಂದದ ತಿರುವು ನೀಡುತ್ತೆ ಅಂತ ಅಂದುಕೊಂಡಿರಲೇ ಇಲ್ಲ. ಕೇವಲ ಸಪ್ತಪದಿಯಲ್ಲಲ್ಲ ಬದುಕಿನ ಪ್ರತಿ ಹೆಜ್ಜೆಯೂ ನಿನ್ನನ್ನು ಹಿಂಬಾಲಿಸಲು ತಯಾರಿದೆ.’ ಎಂದೆ ನೀನು. ಆಗ ನನಗೆ ಆಕಾಶ ಮೂರೇ ಗೇಣು ಉಳಿದಿತ್ತು. ಇಷ್ಟು ದಿನ ಕಾಲೇಜಿನ ಕ್ಯಾಂಪಸ್‌ನಲ್ಲಿ ನಿನ್ನತ್ತ ನೋಡುವುದು ಮಾತನಾಡುವುದೇ ಒಂದು ಭಾಗ್ಯವಾಗಿತ್ತು. ಆದರೆ ಇನ್ಮುಂದೆ ಈ ಹೊಸ ಜೀವನಕ್ಕೆ ಹೊಸ ಗಳಿಗೆಯಲ್ಲಿ ಒಂದಾಗಿ ಹಾರುವ ಜೋಡಿ ಹಕ್ಕಿಗಳು. ಈಗ ಈ ಜಾಗ ಒಂಥರ ಹೊಸ ಪ್ರಪಂಚ ತರ ಕಾಣಿಸುತ್ತಿದೆ. ನನ್ನ ಪ್ರೀತಿ ಒಂದು ಸುಂದರ ಕವಿತೆಯಾದರೆ, ನಿನ್ನೊಪ್ಪಿಗೆ ಕವಿತೆಗೆ ಸಿಕ್ಕ ಸುಮಧುರ ಸಂಗೀತವೆನ್ನುತ್ತ ಮೆಲ್ಲನೇ ಹಣೆಗೆ ಹೂ ಮುತ್ತನಿತ್ತೆ. ನೀನು ಸ್ವಲ್ಪ ದೂರ ಸರಿದು ನಾಳೆ ಸಂಜೆ ಸಿಗೋಣ ಊರಿನ ಹೊರವಲಯದಲ್ಲಿ ಎಂದು ಕೈ ಬೀಸಿ ನಡೆದೆ.

ರಾತ್ರಿಯೆಲ್ಲ ಮರುದಿನದ ಸಂಜೆಯ ಕನಸು ಕಾಣುತ್ತ ಹಾಸಿಗೆ ಮೇಲೆ ಉರುಳಾಡಿದೆ. ಕಡುಬೇಸಿಗೆಗೆ ಬತ್ತಿಹೋಗಿದ್ದ ಸಣ್ಣ ಹಳ್ಳಗಳು ತೊರೆಗಳು ಜಿನುಗುತ್ತ ಹರಿಯುತ್ತಿದ್ದವು. ಪ್ರತಿಯೊಂದು ಮರಗಿಡಗಳೂ ಹೊಸ ಚಿಗುರೊಡೆದು ಭುವಿಗೆಲ್ಲ ಹಸಿರು ಹೊದಿಕೆಯಂತೆ ಕಾಣುತ್ತಿತ್ತು. ಅಡಿಕೆ ತೋಟಗಳು, ಬೆಟ್ಟಗುಡ್ಡಗಳು ದಟ್ಟ ಕಾಡೆಲ್ಲ ಕಡುಹಸಿರು ಬಣ್ಣಕ್ಕೆ ತಿರುಗಿತ್ತು. ಸೂರ್ಯನ ಕಿರಣಗಳು ಮತ್ತು ಮಂಜಿನ ನಡುವೆ ನಿರಂತರ ಕಣ್ಣಾಮುಚ್ಚಾಲೆ ಆಟ ನಡೆದಿತ್ತು. ಪ್ರಕೃತಿ ಸೌಂದರ್ಯದ ನಡುವೆ ನಡೆವಾಗ ಆ ದೇವರ ಅದ್ಭುತ ಜಾದೂ ನೀನು ಎಂದೆನಿಸುತ್ತಿತ್ತು. ಮಳೆಯ ಸಿಂಚನವಾಗುತ್ತಿದ್ದಂತೆಯೇ ಮೆಲ್ಲನೆ ಕೈಚಾಚಿ ನಿನ್ನ ಕೈ ಹಿಡಿದಿದ್ದೆ. ನನ್ನ ಒರಟು ಕೈಯಲ್ಲಿ ನಿನ್ನ ಮೃದುವಾದ ಕೈ ಬೆರೆತು ಹೋಗಿತ್ತು. ಮಳೆ ನಿಂತು ಹೋದ ಮೇಲೆ ಹನಿಯೊಂದು ಕಾಡಿದೆ ಎಂಬಂತೆ ಮಳೆ ನಿಂತರೂ ಹನಿಗಳು ಮರಗಳ ನಡುವೆ ತೊಟ್ಟಿಕ್ಕುತ್ತಲೇ ಇತ್ತು. ಕಪ್ಪೆಗಳ ಕರಕರೆ, ಹಂಚಿನ ಮನೆಯ ಮೇಲೆ ಬೀಳುವ ಹನಿಗಳು ಟಪ್ ಟಪ್ ಸದ್ದು ಕೇಳುತ್ತಿತ್ತು. ಕಿಟಕಿಯಾಚೆ ಕಣ್ಣು ಹಾಯಿಸಿದಾಗ ಜೋಡಿ ಹಕ್ಕಿಗಳೆರಡು ಮಳೆಯಿಂದ ತೊಯ್ದು ತೊಪ್ಪೆಯಾಗಿ ಮೈ ಬೆಚ್ಚಗೆ ಮಾಡಿಕೊಳ್ಳಲು ಹವಣಿಸುವ ಸನ್ನಿವೇಶ ಗಮನ ಸೆಳೆಯಿತು.
ನನಗರಿವಿಲ್ಲದೆ ನಿನ್ನ ಮೃದುವಾದ ಕೆನ್ನೆಯನ್ನು ನವಿರಾಗಿ ಸವರಿದೆ. ಆ ಸ್ಪರ್ಶ ಭೂಮಿಗೆ ಬಿದ್ದ ಮೊದಲ ಮಳೆಹನಿಯಂತಿತ್ತು. ನೀನು ನಿನ್ನ ಪುಟ್ಟ ಕೈಗಳಿಂದ ನನ್ನ ಕೈಯನ್ನು ಮೃದುವಾಗಿ ಸವರಿದೆ. ಮೆಲ್ಲನೆ ತಲೆ ಎತ್ತಿ ನಿನ್ನ ಕಣ್ಣುಗಳನ್ನು ನೋಡಿದೆ. ‘ಐ ಲವ್ಯೂ ಎಂದು ಸುಮಧುರ ಧ್ವನಿಯಲ್ಲಿ ಕಿವಿಯಲ್ಲಿ ಪಿಸುಗುಟ್ಟಿದೆ.’ ಕ್ಷಣಾರ್ಧದಲ್ಲಿ ನನ್ನ ಬಲವಾದ ತೋಳುಗಳಲ್ಲಿ ನೀನಿದ್ದೆ. ನನ್ನೆದೆಗೆ ಮುಖ ಒರಗಿಸಿ, ಹೃದಯದ ಬಡಿತ ಆಲಿಸುತ್ತಿದ್ದೆ. ಆ ಅನುಭವ ಇಬ್ಬರಿಗೂ ಹೊಸತು ಇಬ್ಬರಲ್ಲೂ ಒಂದು ಸಣ್ಣ ನಡುಕ. ಇಬ್ಬರ ಬೆರಳುಗಳ ನಡುವೆ ಹೊಸದೊಂದು ಪ್ರೇಮಕಾವ್ಯ ಸೃಷ್ಟಿಯಾಗುತ್ತಿದೆ ಎಂದೆನಿಸಿತು. ನಿನ್ನ ಆ ಅಪ್ಪುಗೆ ತಂಗಾಳಿಗೆ ಹೂವೊಂದು ಮೆಲ್ಲನೆ ವಾಲಿ, ರೆಂಬೆಯನ್ನು ಅಪ್ಪಿಕೊಂಡಂತಿತ್ತು. ನಿನ್ನ ಬೆಚ್ಚಗಿನ ಉಸಿರು ನನ್ನ ಮುಖಕ್ಕೆ ತಾಗುತ್ತಿತ್ತು. ಇಬ್ಬರ ಅಧರಗಳು ನಡುಗುತ್ತಿದ್ದವು. ನಿಧಾನವಾಗಿ ನಿನ್ನ ಮುಖವನ್ನು ಬೊಗಸೆಯಲ್ಲಿ ಎತ್ತಿ ಹಿಡಿದು. ಕಣ್ಣು ಮುಚ್ಚಿದೆ. ತುಟಿಗಳು ಮೆಲ್ಲ ಮೆಲ್ಲನೆ ಕಣ್ಣು ಹಣೆ ಮೇಲೆ ಮುದ್ರೆ ಒತ್ತತೊಡಗಿದವು. ಕೊನೆಗೆ ಅಧರಗಳು ಅಧರಗಳನ್ನು ಒಂದಕ್ಕೊಂದು ಅಪ್ಪಿಕೊಂಡವು. ಆ ಸವಿಯಲ್ಲಿ ಹಿತವಾದ ಅನುಭವವಿತ್ತು. ಕೆಲ ನಿಮಿಷದ ನಂತರ ಸವಿಮುತ್ತುಗಳಲ್ಲಿ ಕಳೆದುಹೋಗಿದ್ದು ಅರಿತು ಹರಿಣಿಯಂತೆ ನಾಚಿ ಓಡಿದೆ. ಇದೀಗ ವಿವಾಹದ ಬಂಧನದಲ್ಲಿ ಬಂಧಿಯಾಗಿದ್ದೇವೆ. ನಿನ್ನ ತುಟಿಯ ಮೇಲಿನ ಸವಿಜೇನಿನ ಖಜಾನೆ ನನ್ನದೇ. ಸವಿಜೇನಿನ ಸವಿ ಸವಿಯಲು ಬೆಚ್ಚನೆ ನಿನ್ನಪ್ಪುಗೆಯಲಿ ತೋಳ ತೆಕ್ಕೆಯಲಿ ಕೆನ್ನೆ ಕೆಂಪಾಗಿಸಲು ಕಾದಿರುವೆ ಬಂದು ಬಿಡು ಕೈಯಲ್ಲಿ ಹಾಲು ತುಂಬಿದ ಲೋಟ ಹಿಡಿದು. ಗೆಳತಿ, ಇನ್ಮೇಲಿನ ಸವಿಮುತ್ತುಗಳಲ್ಲಿ ಆಕರ್ಷಣೆ ಮಾತ್ರ ಇರುವುದಿಲ್ಲ. ಜೀವಮಾನ ಪೂರ್ತಿ ಕಣ್ಣಿನಂತೆ ಕಾಯುವ ಭರವಸೆಯೂ ಇರುತ್ತದೆ ಕಣೆ..
ಇಂತಿ ನಿನ್ನವನು
ಸದಾ (ಸದಾನಂದ)


