ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಕೇಂದ್ರ ಸರ್ಕಾರವು 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕಾ ಅಭಿಯಾನವನ್ನು ರಾಷ್ಟ್ರವ್ಯಾಪಿಯಾಗಿ ಜಾರಿಗೆ ತಂದಿದೆ. ಈ ಲಸಿಕೆಯು ಕ್ಯಾನ್ಸರ್ ಉಂಟುಮಾಡುವ ವೈರಸ್‌ಗಳ ವಿರುದ್ಧ ಶೇಕಡಾ ೯೩-೧೦೦ ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಹೇಳಿದರು.
ತಾಲೂಕಿನ ಹೀರೆಹಳ್ಳಿ ಬಿ ಕಾಲೋನಿಯ ಹಾಲು ಉತ್ಪಾದಕ ಕೇಂದ್ರದ ಆವರಣದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಚ್‌ಪಿವಿ ಲಸಿಕೆ ಆಧುನಿಕ ಜೈವಿಕ ತಂತ್ರಜ್ಞಾನದ ಮೆಡಿಕಲ್ ಡೋಸ್ ಎಂದು ಹೇಳಬಹುದಾಗಿದೆ. ಶಿಫಾರಸು ಮಾಡಿರುವ ವಯಸ್ಸಿನಲ್ಲಿ ಲಸಿಕೆಯನ್ನು ನೀಡಿದಾಗ, ವೈರಸ್ ದೇಹವನ್ನು ಪ್ರವೇಶಿಸುವ ಮೊದಲು, ಅಂದರೆ ಸೂಕ್ತ ವಯಸ್ಸಿನಲ್ಲಿ (ಪ್ರಮುಖವಾಗಿ 9 ರಿಂದ 14 ವರ್ಷದೊಳಗೆ) ಈ ಲಸಿಕೆಯನ್ನು ನೀಡಿದರೆ, ಶೇ. 90ರಷ್ಟು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ. ಸದರಿ ಲಸಿಕೆಯ ಫಲಾನುಭವಿಗಳು 14 ವರ್ಷದ ಹೆಣ್ಣು ಮಕ್ಕಳಾಗಿದ್ದು. HPV ಲಸಿಕಾಕರಣವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ಮೂಲಕ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಪೌಷ್ಟಿಕ ಆಹಾರ ಆಹಾರ ಪದಾರ್ಥಗಳ ಬಳಕೆ, ಸೊಪ್ಪು ತರಕಾರಿ, ಬೇಳೆಕಾಳು, ಹಣ್ಣುಗಳ ಸೇವನೆ ಮತ್ತು ಶುದ್ಧ ಕುಡಿಯುವ ನೀರನ್ನು ಬಳಸುವ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಪ್ಪ ರಮಾಣಿ, ವಕೀಲರಾದ ಅಭಿಕುಮಾರ್ , ಕ್ಷೀರ ಸಂಘದ ಅಧ್ಯಕ್ಷರಾದ ಲಕ್ಷ್ಮಿ, ಉಪಾಧ್ಯಕ್ಷರಾದ ನಾಗರತ್ನ, ಹಾಲು ಉತ್ಪಾದನ ಕೇಂದ್ರದ ಕಾರ್ಯ ದರ್ಶಿ ಜ್ಯೋತಿ ಹಾಜರಿದ್ದರು.

