ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಾಯಿಕೊಡೆಗಳಂತೆ ಹೆಮ್ಮರವಾಗಿ ಬೆಳೆದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಶನ್ ಹಾವಳಿಗೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಮಿತಿಮೀರಿದ ಡೋನೇಶನ್ ಹಾವಳಿ ಕೂಡಲೇ ತಡೆಗಟ್ಟಬೇಕು ಎಂದು ತಹಶಿಲ್ದಾರ ಬಿ.ಎಸ್ ಕಡಕಭಾವಿ ಅವರಿಗೆ ಕರ್ನಾಟಕ ಯುವ ರಕ್ಷಣಾ ವೇದಿಕೆ ಇಂಡಿ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲ ಕೋಳಿ ಮಾತನಾಡಿ, ತಾಲೂಕಿನಾದ್ಯಾಂತ ಖಾಸಗಿ ಶಾಲೆಗಳಲ್ಲಿ ಡೋನೇಶನ್ ಹಾವಳಿ ಹೆಚ್ಚಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು, ಒಂದೊಂದು ಶಿಕ್ಷಣ ಸಂಸ್ಥೆಗಳು ಒಂದೊಂದು ರೀತಿಯ ಶಿಕ್ಷಣ ಶುಲ್ಕವನ್ನು ಪಡೆಯುತ್ತಿವೆ. ಎಲ್‌ಕೆಜಿಯಿಂದ ಎಸ್.ಎಸ್.ಎಲ್.ಸಿ. ವರೆಗೂ ಕನಿಷ್ಠ ₹ 10 ಸಾವಿರದಿಂದ ರಿಂದ ಗರಿಷ್ಠ ₹ 65 ಸಾವಿರ ಶಿಕ್ಷಣ ಶುಲ್ಕು ಪಡೆಯುತ್ತಿವೆ ಮತ್ತು ಪಠ್ಯಪುಸ್ತಕ, ಶಾಲಾಸಮವಸ್ತ್ರ, ಸ್ಕೂಲ್ ಬ್ಯಾಗ್, ಶಾಲಾ ವಾಹನ ಇತರೆ ಶುಲ್ಕ ಸೇರಿದರೆ ಪ್ರತಿವರ್ಷ ₹ 30 ರಿಂದ ₹ 50 ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿಗಳು ಭರಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಶಿಕ್ಷಣ ಸಂಸ್ಥೆಯವರು ಬಡ ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿವೆ. ಈ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದಿರುವುದು ವಿದ್ಯಾರ್ಥಿಗಳ ಪಾಲಕರಿಗೆ ಅನ್ಯಾಯವಾದಂತೆ ಎಂದರು.
ಈ ಕೂಡಲೇ ತಹಶೀಲ್ದಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಯವರು, ಪೋಷಕರ, ಜನಪ್ರತಿನಿಧಿಗಳ, ವಿವಿಧ ಸಂಘಟನೆಗಳ ಸಭೆ ಕರೆದು ಡೊನೇಶನ್ ಹಾವಳಿಗೆ ಕಡಿವಾಣ ಹಾಕುವ ಕಾರ್ಯ ನಡೆಯಬೇಕು. ಒಂದು ವೇಳೆ ಪ್ರಮಾಣಿಕ ಪ್ರಯತ್ನ ಮಾಡಬೇಕು ಇಲ್ಲದಿದ್ದರೆ, ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ತಿಕ ಧರನೆವರ, ನಿತೀನ್ ಅಂಜುಟಗಿ, ಸಂತೋಷ ತಳವಾರ, ಪರಶುರಾಮ ಕರಜಗಿ, ಸಂದೀಪ ಕರಜಗಿ, ಶ್ರೀಧರ ನಾಟೀಕಾರ, ಆಕಾಶ ಕುಂಬಾರ, ರವಿ ಧರನೆವರ, ರಾಹುಲ್ ಹಿಳ್ಳಿ, ಸಂಜೀವ ಅಂಜುಟಗಿ, ಶಶಿ ಹಿರೇಮಠ, ಅಂಬರೀಶ್ ಬಗಲಿ, ಅಂಬರೀಶ್ ಜುಮನಾಳ ಸೇರಿದಂತೆ ಅನೇಕ ಯುವಕರು ಹಾಜರಿದ್ದರು.

