ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಬೂಟ್, ಷೂ ಸೇರಿದಂತೆ ಪಠ್ಯಪುಸ್ತಕ ಉಚಿತವಾಗಿ ವಿತರಿಸುತ್ತಿದೆ. ಆದ್ದರಿಂದ ಪಾಲಕರು ಖಾಸಗಿ ಶಾಲೆಯ ವ್ಯಾಮೋಹಕ್ಕೆ ಒಳಗಾಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು’ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ಹಣಮಂತ ಶೆಟ್ಟೆನ್ನವರ ಮನವಿ ಮಾಡಿದರು.
ತಾಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಉಪ್ಪಾರ ತೋಟದಲ್ಲಿ ಮುಖ್ಯದ್ವಾರದ ಬಳಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೂಗಳನ್ನು ಹಾಕುವುದರ ಮೂಲಕ ಮತ್ತು ಕೈಯಲ್ಲಿ ಗುಲಾಬಿ ಹೂ ನೀಡುವುದರ ಮೂಲಕ ಮುಗುಳ್ನಗೆಯಿಂದ ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಬರಮಾಡಿಕೊಂಡರು. ನಂತರ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ನಂತರ ಮುಖ್ಯೋಪಾಧ್ಯಾಯರಾದ ಕಾಶಿನಾಥ್ ಜಾಧವ ಮಾತನಾಡಿ, ನಿರಂತರ ಅಧ್ಯಯನ, ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ. ಉನ್ನತ ಶಿಕ್ಷಣದ ಜೊತೆಗೆ ಉನ್ನತ ಹುದ್ದೆಯನ್ನು ಅಲಂಕರಿಸುವತ್ತ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಿರಿಯರಾದ ಸದಾಶಿವ ಜಾಧವ, ಅರ್ಜುನ ಜಾಧವ, ಹಾಗೂ ಶಾಲೆಯ ಶಿಕ್ಷಕರು, ಸೇರಿದಂತೆ ಎಸ್.ಡಿ.ಎಮ್.ಸಿ ಸದಸ್ಯರು ಉಪಸ್ಥಿತರಿದ್ದರು.

