ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮಕ್ಕಳು ಶಿಕ್ಷಣದ ಜೊತೆಗೆ ಕಲೆ, ಸಂಗೀತ, ಕ್ರೀಡೆ ಇವುಗಳಿಗೂ ಕೂಡ ಗಮನ ಕೊಡಬೇಕು ಇದರಿಂದ ಆತಂಕ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಸಾಧಿಸಲು, ಆರೋಗ್ಯಪೂರ್ಣ ಜೀವನ ಸಾಗಿಸಲು ಸಹಾಯಕವಾಗುತ್ತವೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ ಕೆ. ಆನಂದ ಹೇಳಿದರು.
ಇಲ್ಲಿಯ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ನವೋದಯ ಶಾಲೆಗಳ ವಲಯ ಮಟ್ಟದ ‘ಶಿಕ್ಷಣದಲ್ಲಿ ಕಲೆ ಮತ್ತು ಕಲೋತ್ಸವ’ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನವೋದಯ ಶಾಲೆಯಲ್ಲಿ ದೊರೆಯುತ್ತದೆ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ನಾನಾ ಕಲೆಗಳ ಅನಾವರಣವೂ, ಆ ಕಲೆಗಳಿಗೆ ಪ್ರೋತ್ಸಾಹವೂ ಇಂತಹ ಕಾರ್ಯಕ್ರಮಗಳಿಂದ ದೊರೆಯುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ
ಮುಖ್ಯ ಎಂಜಿನಿಯರ್ ಡಿ. ಬಸವರಾಜ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಓದುವುದರ ಜೊತೆಗೆ ಸಹಪಠ್ಯ ಚಟುವಟಿಕೆಗಳು ಕೂಡ ಮುಖ್ಯ ಎಂದರು.
ವೇದಿಕೆಯ ಮೇಲೆ ತಹಶೀಲ್ದಾರ್ ಎ.ಡಿ. ಅಮರಾವದಗಿ ಇದ್ದರು.
ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಕೆ.ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎ.ಓ. ಇಟಗಿ, ಬಿ.ಸಿ. ಸಬರದ, ಮಂಜುನಾಥ ಟಿ.ಎಚ್ , ಸಂಜೀವಕುಮಾರ ಜೋಡಟ್ಟಿ, ಹೇಮಲು ಪವಾರ, ಎಂ. ತಿಪ್ಪೇಸ್ವಾಮಿ ಇದ್ದು, ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕಲೋತ್ಸವದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದ ೨೦ ಜವಾಹರ ನವೋದಯ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.