ಮೇನ್ ಬಜಾರ್ ರಸ್ತೆ ಅತಿಕ್ರಮಿಸಿಕೊಂಡ ವ್ಯಾಪಾರ ಮಳಿಗೆಗಳು
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮೇನ್ ಬಜಾರ್ ಮೂಲಕ ಪಟ್ಟಣದ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ವ್ಯಾಪಾರಸ್ಥರಿಂದ ಅತಿಕ್ರಮಣಗೊಳ್ಳುತ್ತಿದ್ದು, ಕೂಡಲೇ ಸ್ಥಳೀಯ ಆಡಳಿತ ಅತಿಕ್ರಮಣ ಕುರಿತು ಕ್ರಮ ವಹಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದ ತಾಳಿಕೋಟಿ ಸೇತುವೆಯ ನಂತರ ಬರುವ ಬಲಭಾಗದ ಮುಖ್ಯ ರಸ್ತೆ ಕಲ್ಮೇಶ್ವರ, ರಾವುತರಾಯ ದೇವಾಲಯಗಳು ಸೇರಿದಂತೆ ಮೇನ್ ಬಜಾರ್ ಸಂಪರ್ಕದ ಮುಖ್ಯ ರಸ್ತೆಯಾಗಿದೆ. ಇಲ್ಲಿ ವ್ಯಾಪಾರಸ್ಥರು ಬಹುತೇಕ ಜಾಗ ಅತಿಕ್ರಮಿಸಿ ರಸ್ತೆಯ ಎಡಬಲಗಳಲ್ಲಿ ಬೇಕಾಬಿಟ್ಟಿಯಾಗಿ ತಮ್ಮ ಅಂಗಡಿಯ ಮುಂದೆ ಹೆಚ್ಚುವರಿಯಾಗಿ ಮಾರಾಟ ಕೈಗೊಳ್ಳುವ ಮೂಲಕ ಸ್ಥಳೀಯ ವಾಹನ ಸವಾರರಿಗೆ ಅಡ್ಡಿಯಾಗಿದ್ದಾರೆ. ಇದರಿಂದ ಸ್ಥಳೀಯ ವಾಹನ ಸವಾರರು, ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಪರದಾಡುವಂತಾಗಿದೆ.
ಈ ಬಗ್ಗೆ ಸದಯ್ಯನಮಠದ ವೀರಗಂಗಾಧರಶ್ರೀಗಳು ಮಾತನಾಡಿ, ಈ ಮೊದಲು ರಸ್ತೆಯಲ್ಲಿ ಲಾರಿ ಸರಾಗವಾಗಿ ಚಲಿಸುತ್ತಿತ್ತು. ಈಗ ಕಾರು ಸಹ ಚಲಿಸದಂತೆ ವ್ಯಾಪಾರಸ್ಥರು ರಸ್ತೆ ಅತಿಕ್ರಮಿಸಿ ಕಿರಿದಾಗಿಸಿದ್ದಾರೆ. ಅದರಲ್ಲೂ ರಸ್ತೆ ಆರಂಭದಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಂದಕ್ಕೆ ಚಾಚಿರುವುದು ಹಾಗೂ ತಳ್ಳುವ ಗಾಡಿಗಳ ವ್ಯಾಪಾರಿಗಳು ಸಹ ಅಲ್ಲಿಯೇ ನಿಂತು ವ್ಯಾಪಾರ ಮಾಡುವ ಕಾರಣ ಇಡೀ ರಸ್ತೆ ಜನರಿಂದ ತುಂಬಿ ವಾಹನಗಳು ಪ್ರವೇಶಿಸದಂತಾಗಿವೆ. ಜನರಿಗೆ ಸರಿಯಲು ಹೇಳಿದರೆ ಜಗಳಕ್ಕೆ ಹಾದಿ. ಇದು ಒಂದೆರಡು ದಿನದ ಸಮಸ್ಯೆಯಲ್ಲ ಹಲವು ದಿನಗಳಿಂದ ಆರಂಭಗೊಂಡು ಈಗ ಹೆಚ್ಚಾಗಿದೆ ಎಂದು ತಮ್ಮ ಅತಂಕ ವ್ಯಕ್ತಪಡಿಸುತ್ತಾರೆ.
ಪಟ್ಟಣ ಈಗ ತಾಲ್ಲೂಕು ಕೇಂದ್ರ, ಮೇನ್ ಬಜಾರ್‌ದ ಕಲ್ಮೇಶ್ವರ ದೇವಾಲಯದ ಕಲ್ಯಾಣ ಮಂಟಪಲ್ಲಿ ಯಾವುದಾದರೂ ಕಾರ್ಯಕ್ರಮ ಇರುವುದು ಸಹಜ. ಜೊತೆಗೆ ರಾವುತರಾಯ ದೇವಸ್ಥಾನಕ್ಕೆ ಕಾರು, ಜೀಪುಗಳ ಮೂಲಕ ಬರುವ ಭಕ್ತರು ಹೆಚ್ಚಾಗಿದ್ದು ಇವರೆಲ್ಲರ ಹಿತದೃಷ್ಟಿಯಿಂದ ವ್ಯಾಪಾರ ಮಳಿಗೆಗಳು ಮುಂದೆ ಚಾಚದಂತೆ ಹಾಗೂ ರಸ್ತೆಯಲ್ಲಿ ವ್ಯಾಪಾರ ಮಾಡದಂತೆ ಸ್ಥಳೀಯ ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರೈತಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂಪತ್ ಜಮಾದಾರ, ವೈದ್ಯ ಮಂಜುನಾಥ ಮಠ, ರಮೇಶಬಾಬು ಮೆಟಗಾರ ಹಾಗೂ ಬಸವರಾಜ ಕಲ್ಲೂರ(ಮುಳಸಾವಳಗಿ).