ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯ ೧೯೮೬ರಲ್ಲಿ ನಿರ್ಮಾಣವಾಗಿದೆ. ಹಲವಾರು ಬಾರಿ ರಿಪೇರಿ ಮಾಡಿಲಾಗಿದೆ. ಕಟ್ಟಡ ಶಿಥಿಲಾವಸ್ಥೆಗೆ ಬಂದು, ಮಳೆ ಬಂದರೆ ಸೋರುವ ಪರಿಸ್ಥತಿಗೆ ಬಂದಿದೆ. ತಾತ್ಕಾಲಿಕವಾಗಿ ನೂತನ ಕಟ್ಟಡದಲ್ಲಿ ಕಾರ್ಯಬಾರಿ ನಡೆಸಲು ತೀರ್ಮಾನಿಸಲಾಗಿದೆ. ಕೆಲವೇ ದಿನಗಳಲ್ಲಿ ಜಿ-ಪ್ಲಸ್ ೫ ಯೋಜನೆಯಂತೆ ನೂತನ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಹೇಳಿದರು.
ಪಟ್ಟಣದ ವಕೀಲರ ಸಂಘದ ಕಾರ್ಯಾಲಯದಲ್ಲಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ ತಿಂಗಳಿನಲ್ಲಿ ೫೦ವರ್ಷಗಳ ಸವಿ ನೆನೆಪಿಗಾಗಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ, ಜಿಲ್ಲಾ ನ್ಯಾಯಾಧೀಶರು, ಆಡಳಿತಾತ್ಮಕ ನ್ಯಾಯಾಧೀಶರೊಳಗೊಂಡಂತೆ ಕಾನೂನು ಮತ್ತು ಜಿಲ್ಲೆಯ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳನ್ನು ಆವ್ಹಾನಿಸಿ ಬ್ರಹತ್ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಸಿಂದಗಿ ತಾಲೂಕಿನಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಸಂಬಂಧಿಸಿದ ಸು.೨ಸಾವಿರ ಪ್ರಕರಣಗಳಿದ್ದು, ಪ್ರಕರಣದ ವಿಚಾರಣೆಗೆ ಜಿಲ್ಲೆಗೆ ಹೋಗಿ ಬರುವುದು ಕಕ್ಷಿದಾರರಿಗೆ ಮತ್ತು ವಕೀಲರಿಗೆ ಕಷ್ಟವಾಗುತ್ತಿತ್ತು. ಜಿಲ್ಲಾ ನ್ಯಾಯಾಲಯ ನೀಡಬೇಕೆಂದು ಆಡಳಿತಾತ್ಮಕ ನ್ಯಾಯಾಧೀಶರಿಂದ ಹಾಗೂ ವಕೀಲರ ಸಂಘದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ತೀರ್ಮಾನವಾಗುವ ಭರವಸೆ ನಮಗಿದೆ. ಅಖಂಡ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಮತ್ತು ಆಲಮೇಲದಲ್ಲಿ ಅತೀ ಶೀಘ್ರದಲ್ಲಿ ನೂತನ ನ್ಯಾಯಾಯಲಗಳು ಪ್ರಾರಂಭವಾಗಲಿವೆ.
ವಿವಿಧ ಸಾಧಕರ ಹೆಸರಿನ ಮೇಲೆ ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ತಾಲೂಕಿನ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಿ ಕಾರ್ಯಕ್ರಮದ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ರಾಜ್ಯ ಮಟ್ಟದ ಕ್ರೀಕೆಟ್ ಹಮ್ಮಿಕೊಳ್ಳವ ವಿಚಾರವಿದೆ. ನಿವೇಶನ ರಹಿತ ನ್ಯಾಯವಾದಿಗಳು ನಮ್ಮಲ್ಲಿದ್ದಾರೆ. ಅವರ ಒಳಿತಿಗಾಗಿ ೪ಎಕರೆ ಜಮೀನನ್ನು ಖರೀದಿಸಿ ಅವರಿಗೆ ಉಚಿತವಾಗಿ ನಿವೇಶನ ನೀಡಿ ವಕೀಲರ ಕಾಲೋನಿ ಮಾಡುವ ಮಹತ್ವದ ಗುರಿಯನ್ನು ಹೊಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎ.ಜಿ.ಮಸರಕಲ್, ಸಹ ಕಾರ್ಯದರ್ಶಿ ಪಿ.ಎಂ.ಬಡಿಗೇರ, ಎಸ್.ಎಸ್.ಬಮ್ಮನಜೋಗಿ ಸೇರಿದಂತೆ ಅನೇಕರು ಇದ್ದರು.