ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ರೈತರ ಅಪ್ಲಿಕೇಶನ್ ಈಗಾಗಲೇ ಚಾಲನೆಯಲ್ಲಿದೆ. ಇದರ ಮೂಲಕ ರೈತರು ತಮ್ಮ ಬೆಳೆ ಸಮೀಕ್ಷೆ ಮಾಡಬಹುದಾಗಿದೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಇತ್ತೀಚಿಗೆ ಜರುಗಿದ ಬೆಳೆ ಸಮೀಕ್ಷೆ ಕುರಿತಾದ ಪಿಆರ್‌ಓಗಳ ತರಬೇತಿ ಹಾಗೂ ಕಿಟ್ ವಿತರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ ತಿಂಗಳ ದಿ: ೧೫ ರಿಂದ ೩೧ ರವರೆಗೆ ರೈತರು ತಮ್ಮ ಬೆಳೆ ಸಮೀಕ್ಷೆಯನ್ನು ರೈತರ ಅಪ್ಲಿಕೇಶನ್ ಮೂಲಕ ವೈಯಕ್ತಿಕವಾಗಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ನಂತರ ಸೆಪ್ಟೆಂಬರ್ ೩೦ ರವರೆಗೆ ಬೆಳೆ ಸಮೀಕ್ಷೆಗಾರರ ಮೂಲಕ ಬೆಳೆ ಸಮೀಕ್ಷೆ ಮಾಡಿಸಬಹುದಾಗಿದೆ ಎಂದರು.
ತಹಶೀಲ್ದಾರ ಪ್ರಕಾಶ ಸಿಂದಗಿ ಮಾತನಾಡಿ, ಕಳೆದ ಸಾಲಿನಲ್ಲಿ ಬೆಳೆಸಮೀಕ್ಷೆ ಕೈಗೊಂಡಾಗ ಜಮೀನಿನಲ್ಲಿ ಎರಡು ಬೆಳೆಗಳಿದ್ದಾಗ ಸಮೀಕ್ಷೆಗಾರರು ಸಮೀಕ್ಷೆಯಲ್ಲಿ ಕೇವಲ ಒಂದೇ ಬೆಳೆಯ ಹೆಸರು ನಮೂದಿಸಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾದ ಕುರಿತು ವರದಿಯಾಗಿವೆ. ಆದ್ದರಿಂದ ಈ ಬಾರಿ ಅಂತಹ ಯಾವುದೇ ತಪ್ಪಗಳು ಮರುಕಳಿಸದಂತೆ ಕ್ರಮ ವಹಿಸಲು ಸೂಚಿಸಿದರು.
ಕೃಷಿ ಅಧಿಕಾರಿಗಳಾದ ಶರಣಗೌಡ ಬಿರಾದಾರ, ಎಚ್.ಕೆ.ಪಾಟೀಲ, ಆತ್ಮ ಸಿಬ್ಬಂದಿ ಸುಧಾಕರ ಇರಸೂರ ಸಹಿತ ತಾಲ್ಲೂಕಿನ ಗ್ರಾಮಾಡಳಿತಾಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆಗಾರರು ಇದ್ದರು.