ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ದಿ.ಖತಾಲಸಾಬ ಆಲಗೂರ ಇವರ ಹೆಸರಿನಲ್ಲಿ ಪ್ರತಿ ವರ್ಷವೂ ಕೊಡಮಾಡುವ ಅಪ್ಪ ರಾಜ್ಯ ಪ್ರಶಸ್ತಿಗೆ ಬೆಂಗಳೂರಿನ ಇನ್ ಸೈಟ್ಸ್ ಯುಪಿಎಎಸ್‌ಸಿ ಕೆರಿಯರ್ ಅಕಾಡೆಮಿ ಮುಖ್ಯಸ್ಥ ವಿನಯಕುಮಾರ ಜಿ.ಬಿ ಹಾಗೂ ವಿಜಯಪುರದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೊತದಾರ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ೫ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಆ.೩೦ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ ಮಂದಿರ ಭವನದಲ್ಲಿ ನಡೆಯುವ ಆರಕ್ಷಕ ಕಲಾ ಸಂಗಮ, ಅಪ್ಪ ಪ್ರಶಸ್ತಿ ಪ್ರದಾನ, ಶಿಕ್ಷಕರ ದಿನಾಚರಣೆ ಹಾಗೂ ವಿವಿಧ ಸಾಧಕರಿಗೆ ಪುರಸ್ಕಾರ ಸಮಾರಂಭದಲ್ಲಿ ನಟ ವಿಜಯ ರಾಘವೇಂದ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಲೋಕಾಯುಕ್ತ ಡಾ.ಸಂತೋಷ ಹೆಗಡೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಿರಿಯ ಸಾಹಿತಿಗಳು ಉಪಸ್ಥಿತರಿರುವರು ಎಂದು ಮೌಲಾಲಿ ಆಲಗೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆಯ ವಿನಯಕುಮಾರ ಜಿ.ಬಿ ಸುಮಾರು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಯುಪಿಎಸ್‌ಸಿ ತರಬೇತಿ ನೀಡುವ ಮೂಲಕ ನೂರಾರು ಯುವಕ/ಯುವತಿಯರು ಐಎಎಸ್/ಐಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅಲ್ಲದೇ ಬಡ, ಶೋಷಿತ ಹಿಂದುಳಿದ ಜನರ ಧ್ವನಿಯಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತ ಬಂದಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ನಿಸ್ವಾರ್ಥ ಸೇವೆ ಗೈದು, ಬಡ ವಿದ್ಯಾರ್ಥಿಗಳ ಶಾಲಾ ಫೀ ಸ್ವತಃ ತಾವೇ ಭರಿಸಿ, ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಮಹೇಶ ಪೋತೆದಾರ ಅವರ ಸಾಮಾಜಿಕ ಸೇವಾ ಮನೋಭಾವನ್ನು ಸ್ಮರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಬಿರೋಶನ್ ಪ್ರಕಾಶನ, ಬೋರಗಿ ಪ್ರಕಟಣೆಯಲ್ಲಿ ತಿಳಿಸಿದೆ.
