ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೀರಾವರಿಯಿಂದಾಗಿ ಕೃಷಿಯಷ್ಟೇ ಅಲ್ಲ, ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಮಾರಾಟ ಮಾಡುವವರಿಗೂ ವರದಾನವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸಿಂದಗಿ ಪಟ್ಟಣದಲ್ಲಿ ಸ್ವರಾಜ್ ಟ್ರ್ಯಾಕ್ಟರ್ ನೂತನ ಶೋ ರೂಂ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಆಧುನೀಕರಣದತ್ತ ಸಾಗಿರುವುದರಿಂದ ಅದಕ್ಕೆ ತಕ್ಕಂತೆ ಕೃಷಿ ಸಲಕರಣೆಗಳನ್ನು ಬಳಸಬೇಕಾಗುತ್ತಿದೆ. ಟ್ರ್ಯಾಕ್ಟರ್ ರೈತರ ಬೆನ್ನೆಲುಬಾಗಿದ್ದು, ರೈತರ ಶ್ರಮವನ್ನು ಕಡಿಮೆ ಮಾಡಿ ಹೊಲದ ಕೆಲಸವನ್ನು ಬೇಗ ಮತ್ತು ಸುಲಭವಾಗಿ ಮಾಡಲು ಸಹಾಯವಾಗುತ್ತದೆ. ನೀರಾವರಿ ಯೋಜನೆಗಳು ರೈತರಿಗೆ ಆರ್ಥಿಕ ಬಲ ಮತ್ತು ಸಮೃದ್ಧಿ ತರುತ್ತವೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಮಾಡಿರುವ ನೀರಾವರಿ ಯೋಜನೆಗಳಿಂದ ಕೃಷಿಗಷ್ಟೇ ಅಲ್ಲ, ಕೃಷಿ ಸಲಕರಣೆಗಳ ವ್ಯಾಪಾರಿಗಳಿಗೂ ವರದಾನವಾಗಿದೆ. ಅಟೊಮೊಬೈಲ್ ಉದ್ಯಮಿ ಬಿ. ಟಿ. ತರಸೆ ಅವರು ಸೂರತ್ಕಲ್ ನಲ್ಲಿ ಕೆಮಿಕಲ್ ಎಂಜಿನಿಯರ್ ಮುಗಿಸಿ ಕೃಷಿಯ ಕಡೆಗೆ ತಮ್ಮನ್ನು ತೊಡಗಿಸಿಕೊಂಡಿದ್ದು, ಸದಾ ರೈತಪರ ಚಿಂತನೆ ಹೊಂದಿದ್ದಾರೆ ಎಂದು ಹೇಳಿದರು.
ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳದಿಂದ ಮುಳುಗಡೆಯಾಗುವ ಜಮೀನಿನ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸಚಿವರು, ಶಾಸಕರೊಂದಿಗೆ ಸಭೆ ನಡೆಸಲಾಗಿದೆ. ರೈತರ ಸಹಮತಿಯೊಂದಿಗೆ ಒಪ್ಪಂದದ ಅನ್ವಯ ಪರಿಹಾರ ನೀಡಲು ಸಿಎಂ ಕೂಡ ಒಪ್ಪಿದ್ದಾರೆ. 20 ಹಳ್ಳಿಗಳ ಪುನರ್ವಸತಿ ಮತ್ತು ಹೊಲಗಾಲುವೆಗಳ ನಿರ್ಮಾಣಕ್ಕೆ ಹಣ ಹೊಂದಿಸಬೇಕು. ಇದಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಮತ್ತು ಪುನರ್ವಸತಿಗೆ ಅಗತ್ಯವಿರುವ ಭೂಸ್ವಾಧೀನಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ. ಸಿಎಂ ಜೊತೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ರಾಜ್ಯದ ಪಾಲಿಗೆ ಹಂಚಿಕೆಯಾದ ನೀರನ್ನು ಅತೀ ಕಡಿಮೆ ಅವಧಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ನಮ್ಮ ಆದ್ಯತೆಯಾಗಿದೆ. ಈ ಭಾಗದಲ್ಲಿ ಮಾಜಿ ಸಚಿವ ಎಂ. ಸಿ. ಮನಗೂಳಿ ಕೂಡ ತಮ್ಮ ಅವಧಿಯಲ್ಲಿ ನೀರಾವರಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರೂ. 10 ಲಕ್ಷ ಕೋ. ಬಂಡವಾಳ ರಾಜ್ಯಕ್ಕೆ ಬರುತ್ತಿದ್ದು, 6 ಲಕ್ಷ ಯುವಕರಿಗೆ ಉದ್ಯೋಗ ಸಿಗಲಿವೆ. ಅದರಲ್ಲಿ ಶೇ. 45ರಷ್ಟು ಉತ್ತರ ಕರ್ನಾಟಕದಲ್ಲಿ ಹೂಡಿಕೆಯಾಗಲಿದೆ. ವಿಜಯಪುರ ಜಿಲ್ಲೆಯಲ್ಲಿ ಆರು ಕಾರ್ಖಾನೆಗಳು ರೂ. 15 ಸಾವಿರ ಕೋ. ಹೂಡಿಕೆ ಮಾಡಲಿವೆ. ಜಿಲ್ಲೆಗೆ ಒಟ್ಟು ರೂ. 1 ಲಕ್ಷ ಕೋ. ಬಂಡವಾಳ ಬರಬೇಕು. 50 ಸಾವಿರ ಜನರಿಗೆ ಉದ್ಯೋಗ ಒದಗಿಸಬೇಕು ಎಂಬುದು ನನ್ನ ಕನಸಾಗಿದೆ ಎಂದು ಸಚಿವರು ಹೇಳಿದರು.
ಸಿಂದಗಿ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಶುಭ ಹಾರೈಸಿದರು.
ಟ್ರ್ಯಾಕ್ಟರ್ ಶೋರೂಂ ಮಾಲಿಕ ಮತ್ತು ಉದ್ಯಮಿ ಬಿ. ಟಿ. ತರಸೆ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನೊಳ್ಳಿಯ ಷಡಕ್ಷರಿ ಶ್ರೀ ಶಿದ್ಧಲಿಂಗೇಶ್ವರ ಶಿವಾಚಾರ್ಯರು, ಹಿರಿಯ ಸಹಕಾರಿ ಎಂ. ಜಿ. ಪಾಟೀಲ, ಆಲಮೇಲ ಪ. ಪಂ. ಅಧ್ಯಕ್ಷ ಸಾದೀಕ ಸುಬಂಡ, ಮುಖಂಡರಾದ ಅಶೋಕ ವಾರದ, ನರಸಿಂಗಪ್ರಸಾದ ತಿವಾರಿ, ಡಾ. ಗಂಗಾಧರ ಸಂಬಣ್ಣಿ, ಚನ್ನಬಸಪ್ಪ ವಾರದ ಮುಂತಾದವರು ಉಪಸ್ಥಿತರಿದ್ದರು.
” ಈ ಭಾಗದಲ್ಲಿ ಎಂ. ಬಿ. ಪಾಟೀಲ ಅವರ ನೀರಾವರಿ ಯೋಜನೆಗಳಿಂದಾಗಿ ಸಾಕಷ್ಟು ಅಭಿವೃದ್ಧಿಯಾಗಿದೆ. ತರಸೆ ಅವರು ತಮ್ಮ ಕಾಯಕದ ಮೂಲಕ ಸಿಂದಗಿಯ ರೈತರಿಗೆ ಆಧುನಿಕ ತಂತ್ರಜ್ಞಾನದ ಟ್ರ್ಯಾಕ್ಟರ್ ಮಾರಾಟ ಮಾಡುವ ಮೂಲಕ ರೈತಸ್ನೇಹಿಯಾಗಿದ್ದಾರೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ