ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಸ್ತುತ ಇರುವ ಆಲಮಟ್ಟಿ ಅಣೆಕಟ್ಟು ೫೧೯-೬೦ ಮೀ. ಎತ್ತರದಿಂದ ೧೨೩೩-೦೮೧ ಟಿಎಂಸಿ ನೀರು ರಾಜ್ಯದ ಪಾಲಾಗಿದ್ದು, ಇದರಲ್ಲಿ ವಿಜಯಪುರ, ಬಾಗಲಕೋಟ, ಕೊಪ್ಪಳ, ಕಲಬುರಗಿ, ಯಾದಗಿರಿ, ರಾಯಚೂರ ಜಿಲ್ಲೆಗಳಿಗೆ ಉಪಯೋಗಿಸಲಾಗುತ್ತಿದೆ. ಇನ್ನು ಅಣೆಕಟ್ಟು ೫೨೪-೨೫೬ ಮೀ.ಗೆ ಹೆಚ್ಚಳವಾದರೆ ೧೩೦ಟಿಎಂಸಿ ನೀರು ಹೆಚ್ಚುವರಿಯಾಗಿ ಲಿಭಿಸಲಿದೆ. ಹಾಗಾಗಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.
ಸಿಂದಗಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾ|| ಬ್ರಜೇಶ್‌ಕುಮಾರ ನೇತೃತ್ವದ ೨ನೆಯ ನ್ಯಾಯಾಧೀಕರಣ ೨೦೧೦ರಲ್ಲಿ ತೀರ್ಪು ನೀಡಿತ್ತು. ೨೦೧೩ರಲ್ಲಿ ಸೃಷ್ಟಿಕರಣ ತೀರ್ಪು ನೀಡಿ, ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು ೫೨೪-೨೫೬ ನಿಲ್ಲಿಸಲು ಅನುಮತಿ ನೀಡಿದೆ. ತೀರ್ಪು ನೀಡಿ ೧೫ ವರ್ಷಗಳಾದರೂ ಇಲ್ಲಿಯವರೆಗೂ ಜಲಾಯಶಯದ ನೀರಿನ ಮಟ್ಟವನ್ನು ಹೆಚ್ಚಿಸಲು ಸರಕಾರ ಮುತುವರ್ಜಿ ವಹಿಸಿಲ್ಲ. ಅಲ್ಲದೇ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿಲ್ಲ. ಮಹಾರಾಷ್ಟ್ರ ಸರಕಾರದ ತಕರಾರಿನ ನೆಪವನ್ನು ಮುದ್ದಿಟ್ಟುಕೊಂಡು ಅನಾವಶ್ಯಕ ಕಾಲಹರಣ ಮಾಡುತ್ತಿದೆ. ಈ ವಿಚಾರವಾಗಿ ರಾಜ್ಯ ಸರಕಾರ ಕೇಂದ್ರ ಸರಕಾರದ ಕಡೆಗೆ ಬೆರಳು ಮಾಡಿ ತೋರಿಸುತ್ತಾ ಕೇಂದ್ರ ಸರಕಾರವೇ ಅಧಿಸೂಚನೆ ಹೊರಡಿಸಿಲ್ಲ ಎಂದು ಹೇಳುತ್ತಾ, ಉತ್ತರ ಕರ್ನಾಟಕ ಮಹತ್ವಾಕಾಂಕ್ಷಿ ಯೋಜನೆ ಹಳಿ ತಪ್ಪಿದೆ. ಅವಳಿ ಜಿಲ್ಲೆಗಳ ರೈತರು ಸರಕಾರಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಜಲಾಶಯದ ಕಥೆ ರೈತರಿಗೆ ಕಣ್ಣಿರಿನ ಕಥೆಯಾಗಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಪಾಳಿಗೆ ಅಕ್ಷಯ ಪಾತ್ರೆಯಾಗಿ, ಅವರ ಸ್ವಾರ್ಥಕ್ಕೆ ಬಲಿಯಾಗಿ ಈ ಯೋಜನೆ ದಶಕಗಳಿಂದ ನೆನೆಗುದಿಗೆ ಬಿದ್ದು ನಲಗುವಂತಾಗಿದೆ ವಿಷಾಧಿಸಿದರು.
ಸದ್ಯ ಅಣೆಕಟ್ಟು ೫೧೯-೬೦ ರಿಂದ ೫೨೪-೨೫೬ಮೀ.ಗೆ ಹೆಚ್ಚಿಸಲು ಮತ್ತು ಈ ಯೋಜನೆ ಸಾಕಾರಗೊಳಿಸಲು ೧ಲಕ್ಷ ಕೋಟಿಗೂ ಅಧಿಕ ಹಣದ ಅಗತ್ಯವಿದೆ. ಇಷ್ಟೊಂದು ಹಣ ಒದಗಿಸುವುದು ರಾಜ್ಯ ಸರಕಾರಕ್ಕೆ ಅಸಾಧ್ಯ. ಈ ಯೋಜನೆಯನ್ನು ಪೂರ್ಣಗೊಳಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ ಕೇಂದ್ರ ಸರಕಾರ ತನ್ನ ಸುಪರ್ಧಿಗೆ ತೆಗೆದುಕೊಂಡು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.