ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಉತ್ತಮ ಜ್ಞಾನದೊಂದಿಗೆ ಕೌಶಲ್ಯವಿರಬೇಕು, ತಂತ್ರಜ್ಞಾನ ಸೂಕ್ತವಾಗಿ ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಕಾಂತಾ ನಾಯಕ ಹೇಳಿದರು.
ನಗರದ ಬಿ.ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಗುರುವಾರ ಆಯೋಜಿಸಲಾದ ೨೦೨೫-೨೬ ನೇ ಸಾಲಿನ ‘ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಜೀವನದ ಸಾಧಿಸುವ ಛಲ, ಹಟ ಮತ್ತು ಗುರಿಯಿರಬೇಕು. ಅಂದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯವಾಗುತ್ತದೆ. ಇಂದಿನ ವಿದ್ಯಾರ್ಥಿಗಳಿಗಳು ಕೇವಲ ಜ್ಞಾನವನ್ನು ಪಡೆಯದೆ ಅದರೊಂದಿಗೆ ಕೌಶಲ್ಯವು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ನಿರಂತರ ಓದಿನೊಂದಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಪ್ರೊ.ವಿ.ಎಸ್.ಬಗಲಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಪಠ್ಯ ಎಷ್ಟು ಮುಖ್ಯವೋ ಅದರೊಂದಿಗೆ ಸಹಪಠ್ಯವು ಅಷ್ಟೇ ಅವಶ್ಯಕತೆ ಇದೆ. ಪಠ್ಯ ಮತ್ತು ಸಹಪಠ್ಯದಿಂದ ಭವಿಷ್ಯದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಜೀವನವಲ್ಲಿ ದೈಹಿಕವಾಗಿ ಹಾಗೂ ಮಾನಸಿಕ ಸದೃಡತೆಗೆ ದೈಹಿಕ ಕ್ರೀಡೆಯಲ್ಲಿತೊಡಗಬೇಕು. ಮಹಾವಿದ್ಯಾಲಯದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ಆಯೋಜಿಲಾಗುತ್ತದೆ ಅವುಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಮೂರು ವರ್ಷದಲ್ಲಿ ಅವಧಿಯಲ್ಲಿ ಉತ್ತಮಜ್ಞಾನ ಮತ್ತು ಅದರೊಂದಿಗೆ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನಿಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರಾಬಿಯಾ ಎಂ.ಮಿರ್ಧೆ ಮಾತನಾಡಿ, ಕೇವಲ ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದರೊಂದಿಗೆ ಕೌಶಲ್ಯವು ಮುಖ್ಯವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಕಲೆ ಹೊರಜಗತ್ತಿಗೆ ಗೊತ್ತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದಿನ ಜೊತೆಗೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಅಗತ್ಯವಿರುವ ಮೂಲ ಸೌಲಭ್ಯಗಳು ಮಹಾವಿದ್ಯಾಲಯದಲ್ಲಿ ಲಭ್ಯವಿದ್ದು ಅವುಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ.ಶ್ರೀನಿವಾಸ ದೊಡ್ಡಮನಿ, ದೈಹಿಕ ನಿರ್ದೇಶಕ ಎಸ್ ಕೆ ಪಾಟೀಲ, ನ್ಯಾಕ್ ಸಂಯೋಜಕ ಡಾ.ಕೆ.ಮಹೇಶ ಕುಮಾರ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಉಷಾದೇವಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕು.ರೇಣುಕಾ ಸಂಗಡಿಗರು ಪ್ರಾರ್ಥಿಸಿದರು. ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ ಸ್ವಾಗತಿಸಿದರು, ಉಪ ಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ ವಂದಿಸಿದರು.