ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ವಿದ್ಯಾನಗರದ ನಿವಾಸಿ ನಿ.ಶಿಕ್ಷಕಿಯ ನಂಬಿಕೆಗಳಿಸಿದ ಇಬ್ಬರು ಅಪರಿಚಿತರು ಸುಮಾರು ೯೦ ಸಾವಿರ ರೂ. ಬೆಲೆ ಬಾಳುವ ೨೫ ಗ್ರಾಂ. ತೂಕದ ಚಿನ್ನದ ಪಾಟಲಿ (ಬಳೆ) ಕದ್ದು ಪರಾರಿಯಾಗಿದ್ದು, ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಲಕ್ಷ್ಮಿ ಗುರುಲಿಂಗಯ್ಯ ಮಠ ಅವರು ಚಿನ್ನ ಕಳೆದುಕೊಂಡವರಾಗಿದ್ದು, ಎಂದಿನಂತೆ ಸೋಮವಾರ ಸಾಯಂಕಾಲ ವಿದ್ಯಾನಗರದ ಶ್ರೀ ಅರವಿಂದ ಆಶ್ರಮಕ್ಕೆ ಧ್ಯಾನ ಮಾಡುವ ಸಲುವಾಗಿ ತೆರಳುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಅಪರಿಚಿತರು, ಬೆಲೆಬಾಳುವ ಆಭರಣ ಕೈಯಲ್ಲಿ ಹಾಕಿಕೊಂಡು ತಿರುಗಾಡುವುದು ಸೇಫ್ ಅಲ್ಲ ಎಂಬ ಮರಳು ಮಾತಿಗೆ ಮತ್ತು ಪಟ್ಟಣದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ನಿಮ್ಮ ಕೈಯಲ್ಲಿರುವ ಚಿನ್ನಾಭರಣವನ್ನು ಬಿಚ್ಚಿ, ನಾವು ಕೊಟ್ಟಿರುವ ಡಬ್ಬದಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ ಎಂಬ ಮಾತಿಗೆ ಮೋಸಹೋಗಿದ್ದಾರೆ ಎಂದು ಹೇಳಿದ್ದಾರೆ.
ಅವರನ್ನು ನಂಬಿದ ನಿವೃತ್ತ ಶಿಕ್ಷಕಿ ಅವರು ಹೇಳಿದ ಹಾಗೆ ಮಾಡಿದ್ದು, ಆಶ್ರಮಕ್ಕೆ ಹೋದನಂತರ ಅವರು ಕೊಟ್ಟ ಡಬ್ಬಿ ತೆರೆದು ನೋಡಿದಾಗ ಬಂಗಾರದ ಬದಲಿಗೆ ಸಣ್ಣ ಕಲ್ಲು ಇತ್ತು ಎಂದು ಹೇಳಿದ್ದಾರೆ.
ಈ ಬಗ್ಗೆ ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಮುಂದುವರಿಸಿದ್ದಾರೆ.