ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಲೋಕಾಯುಕ್ತ ನ್ಯಾಯಾಧೀಶ ಎಂ ವ್ಹಿ ಪಾಟೀಲ ಹಾಗೂ ಅಧಿಕಾರಿಗಳು ಮಂಗಳವಾರ ಪಟ್ಟಣದ ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದರು.
ಬೆಳ್ಳಂ ಬೆಳ್ಳಿಗ್ಗೆ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯ, ಪಟ್ಟಣ ಪಂಚಾಯತ್ ಕಾರ್ಯಾಲಯ, ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಕಚೇರಿಗಳಲ್ಲಿ ಬಹು ದಿನಗಳಿಂದ ಬಾಕಿ ಉಳಿದುಕೊಂಡ ಪ್ರಕರಣಗಳ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ತರಾಟೆಗೆ: ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರು, ಶಿಕ್ಷಕರಿಂದ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಿದರು.
ವಿದ್ಯಾರ್ಥಿಗಳಿಗೆ ಬಿಸಿ ನೀರು, ಫ್ಯಾನ್ ಹಾಗೂ ಸೂಕ್ತ ವಿದ್ಯುತ್ ಬೆಳಕಿನ ವ್ಯವಸ್ಥೆ ಇರದ್ದನ್ನು ಹಾಗೂ ಇತರೆ ಅವ್ಯವಸ್ಥೆ ಕಂಡ ಲೋಕಾಯುಕ್ತ ಅಧಿಕಾರಿಗಳು ಪ್ರಾಂಶುಪಾಲ, ನಿಲಯ ಮೇಲ್ವಿಚಾರಕರನ್ನು ಹಾಗೂ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.