ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಮ್ಮ ಕಣ್ಣುಗಳ ಶಸ್ತ್ರ ಚಿಕಿತ್ಸೆ ಮಾಡಿಸಲು ಸಾಧ್ಯವಾಗದ ಬಡವರಿಗೆ ಶ್ರಾಣದ ಮಾಸದ ನಿಮಿತ್ಯ ಸಮಾಜ ಸೇವಕ ಅಯೂಬ್ ಮನಿಯಾರ ಅವರು ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮದ ಮೊದಲ ಭಾಗವಾದ ತಪಾಸಣಾ ಶಿಬಿರದಲ್ಲಿ ಅಂದಾಜು ೩೦೦ಕ್ಕೂ ಹೆಚ್ಚು ಬಡವರು ತಮ್ಮ ಕಣ್ಣುಗಳ ತಪಾಸಣೆ ಮಾಡಿಸಿಕೊಂಡರು.
ಪಟ್ಟಣದ ಸ್ಟೇಟ್ ಬ್ಯಾಂಕ್ ಬಳಿ ಇರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಈ ತಪಾಸಣಾ ಶಿಬಿರ ನಡೆದಿದ್ದು, ಹಲವು ವಿಶೇಷ ಸಾಧನಗಳ ಮೂಲಕ ತಪಾಸಣೆ ನಡೆಸಲಾಯಿತು. ಈ ತಪಾಸಣೆಯಲ್ಲಿ ೧೦೨ ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದು ಆ.೧೩, ೧೪, ಮತ್ತು ೧೫ ರಂದು ವಿಜಯಪುರದ ಅನುಗ್ರಹ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ.
ಈ ವೇಳೆ ಚಲವಾದಿ ಸಮಾಜದ ಪ್ರಮುಖರಾದ ಅಡಿವೇಶ ಅಜಮನಿ ಅವರು ಮಾತನಾಡಿ, ಹಲವು ವರ್ಷಗಳಿಂದ ಮನಿಯಾರ ಅವರು ಬಡವರಿಗೆ ಸೇವೆ ನೀಡುತ್ತ ಬಂದಿದ್ದಾರೆ. ನಾನೂ ಕೂಡ ನನ್ನ ಸಂಬಂಧಿಕರನ್ನು, ಸ್ನೇಹಿತರನ್ನು ಕರೆತಂದು ಈ ಶಿಬಿರದಲ್ಲಿ ಶಸ್ತç ಚಿಕಿತ್ಸೆ ಮಾಡಿಸಿದ್ದೇನೆ. ಶಸ್ತç ಚಿಕಿತ್ಸೆ ಮಾಡಿಸಲು ಸಾಧ್ಯವಾಗದ ಬಡವರಿಗೆ ದೇವರು ಮನಿಯಾರ ಅವರ ರೂಪದಲ್ಲಿ ಬಂದು ಕಣ್ಣು ಕೊಡುತ್ತಿದ್ದಾನೆ ಎಂದು ನನ್ನ ಅಭಿಪ್ರಾಯ. ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆಯಲ್ಲಿ ತೊಡಗಿರುವ ಇವರಿಗೆ ದೇವರು ಹೆಚ್ಚಿನ ಶಕ್ತಿ ನೀಡಲಿ ಎಂದರು.
ಪ್ರಮುಖರಾದ ದಾದಾ ಎತ್ತಿನಮನಿ ಅವರು ಮಾತನಾಡಿ ಅಯೂಬ ಮನಿಯಾರ ಅವರ ಈ ಸೇವೆ ಕಳೆದ ೧೦-೧೨ ವರ್ಷಗಳಿಂದ ನಿರಂತರವಾಗಿದೆ. ಇದಷ್ಟೇ ಅಲ್ಲ ಪವಿತ್ರವಾದ ರಂಜಾನ್ ಹಬ್ಬದ ದಿನಗಳಲ್ಲಿ ಬಡವರಿಗೆ ಕಿಟ್ ನೀಡುವದು ಸೇರಿದಂತೆ ಅನೇಕ ಮಾದರಿಯ ಕಾರ್ಯಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ. ಇವರ ಸೇವೆ ಹೀಗೆ ನಿರಂತರವಾಗಿರಲಿ ಎಂದು ಆಶಿಸುವೆ ಎಂದರು.
ವೈದ್ಯ ಕಿಶೋರಕುಮಾರ ತುರಡಗಿ ಅವರು ಮಾತನಾಡಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲು ಕಡಿಮೆ ಅಂದರೂ ೨೦ ರಿಂದ ೩೦ ಸಾವಿರ ರೂ ಖರ್ಚಾಗುತ್ತದೆ. ಸಮಾಜ ಸೇವಕ ಅಯೂಬ ಮನಿಯಾರ ಅವರ ಕೃಪೆಯಿಂದ ಸಾಕಷ್ಟು ಬಡವರು ಉಚಿತವಾಗಿ ಶಸ್ತç ಚಿಕಿತ್ಸೆಗೆ ಒಳಗಾಗುತ್ತಿದ್ದು ಈ ಸೇವೆ ಶ್ಲಾಘನೀಯ ಎಂದರು.
ಸಮಾಜ ಸೇವಕ ಅಯೂಬ ಮನಿಯಾರ ಮಾತನಾಡಿ ಬಡವರ ಸೇವೆ ಮಾಡುವದು ಅಷ್ಟೊಂದು ಸುಲಭವಲ್ಲ. ಸೇವೆ ಮಾಡಲು ನಾವು ಮುಂದೆ ಬಂದರೂ ನಮ್ಮ ಸೇವೆ ಪಡೆಯುವ ಮನಸ್ಸುಗಳು ಬರದಿರುವ ಸಧ್ಯದ ಕಾಲಘಟ್ಟದಲ್ಲಿ ಇಷ್ಟೊಂದು ಜನ ನನ್ನ ಸೇವೆ ಪಡೆಯಲು ಆಗಮಿಸುತ್ತಾರೆ ಎಂದರೆ ನಾನೇ ಭಾಗ್ಯವಂತ. ಸಾಕಷ್ಟು ಕಷ್ಟದ ದಿನಗಳನ್ನು ಕಳೆದು ಬೆಳೆದ ನಾನು ನನ್ನ ತಂದೆ ತಾಯಿಯರ ಸ್ಮರಣಾರ್ಥ ನನ್ನ ಅಲ್ಪ ಸೇವೆ ನೀಡುತ್ತಿದ್ದೇನೆ. ಈ ಸೇವೆಯಲ್ಲಿ ಡಾ.ಪ್ರಭುಗೌಡ ಲಿಂಗದಳ್ಳಿ ಅವರು, ನನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸಾಕಷ್ಟು ಸಾಥ್ ನೀಡುತ್ತಿದ್ದು ನನ್ನ ಸೇವೆಗೆ ಇನ್ನಷ್ಟು ಪ್ರೋತ್ಸಾಹಿಸಿದಂತಾಗಿದೆ ಎಂದರು.
ಈ ವೇಳೆ ಅಯೂಬ ಅವರಿಗೆ ಪುತ್ರ ಅಫ್ತಾಬ ಮನಿಯಾರ, ಅಳಿಯ ಬಾಬಾ ಯಕೀನ್ ಆತ್ಮೀಯರಾದ ಯುಸೂಫ್ ಸಾತಿಹಾಳ, ರಜಾಕ ಹುನಕುಂಟಿ, ಸಾಬೀರ ಬಾಗವಾನ ಸಾಥ್ ನೀಡಿದರು.