ಉದಯರಶ್ಮಿ ದಿನಪತ್ರಿಕೆ
ಇಂಡಿ: ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಯೂರಿಯಾ ರಸಗೊಬ್ಬರ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ರಸಗೊಬ್ಬರ ಮಾರಾಟಗಾರರಿಗೆ ಸೂಚಿಸಿದರು.
ವಿಜಯಪುರ ಹಸಿರು ಸೇನೆ ಜಿಲ್ಲಾಧ್ಯಕ್ಷರು ನೇತೃತ್ವದ ತಂಡ ಪಟ್ಟಣದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿ. ಇಂಡಿ ಅವರು ರಸಗೋಬ್ಬರ ಮಳಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ. ಸರ್ಕಾರ ಯೂರಿಯಾ ಗೊಬ್ಬರವನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ರೂ.೨೬೬ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದವರು ಪ್ರತಿ ಯೂರಿಯಾ ಪ್ಯಾಕೇಟ್ ಬೆಲೆಗಿಂತ ರೂ.೨೦ ರಿಂದ ರಷ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ರೈತರು ದೂರು ನೀಡಿದ್ದರು.
ರಸಗೊಬ್ಬರ ಮಾರಾಟದಲ್ಲಿ ನಿಯಮ ಉಲ್ಲಂಘಿಸಬಾರದು. ರೈತರಿಗೆ ಗೊಬ್ಬರದ ರಸೀದಿ ನೀಡಬೇಕು. ದರಪಟ್ಟಿ ಹಾಕಬೇಕು. ಲಿಂಕ್ ಗೊಬ್ಬರ ಖರೀದಿಸುವಂತೆ ಒತ್ತಾಯಿಸಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮಹಾದೇವಪ್ಪ ಏವೂರ ಹೇಳಿದರು.
ಇದೇ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಭೋಗಿ, ತಮ್ಮರಾಯ ಆಸಂಗಿ, ಹಣಮಂತ ಗುಡ್ಲ, ಮಲ್ಲಿಕಾರ್ಜುನ ಕಣ್ಣೂರ, ಮಲ್ಲಿಕಾರ್ಜುನ ಹೋತ್ರಿ, ರಪೀಕ್ ಚೌಧರಿ, ಶ್ರೀಶೈಲ ಹೂಗಾರ, ಮಾಂತೇಶ ಪಾಟೀಲ, ಸುರೇಶ ಬಿರಾದಾರ, ಸಿದ್ದು ಪೂಜಾರಿ ಸೇರಿದಂತೆ ಅನೇಕ ರೈತರು ಇದ್ದರು.
“ತಾಲ್ಲೂಕಿನ ಎಲ್ಲ ರಸಗೊಬ್ಬರ ಮಳಿಗೆಗಳಲ್ಲಿ ಗೊಬ್ಬರದ ದಾಸ್ತಾನು ಮತ್ತು ದರಪಟ್ಟಿ ಅಳವಡಿಸಲು ಸೂಚಿಸಲಾಗಿದೆ. ಮಳಿಗೆಗಳಲ್ಲಿ ಗೊಬ್ಬರ ಖರೀದಿಸುವಾಗ ಗೊಬ್ಬರದ ದರದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ರೈತರು ನೇರವಾಗಿ ತಮಗೆ ಅಥವಾ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ಅಥವಾ ದೂರು ನೀಡಬೇಕು.”
– ಮಹಾದೇವಪ್ಪ ಏವೂರ
ಕೃಷಿ ಸಹಾಯಕ ನಿರ್ದೇಶಕರು, ಇಂಡಿ
“ತಾಲೂಕಿನಲ್ಲಿ ಹೆಚ್ಚಿನ ದರದಲ್ಲಿ ರಸ ಗೋಬ್ಬರ ಮಾರಾಟ ಮಾಡಿದರೆ ರೈತರು ಹೋರಾಟ ಮಾಡಬೇಕಾಗುತ್ತದೆ.”
– ಎಸ್.ಬಿ.ಕೆಂಭೋಗಿ
ಹಸಿರು ಸೇನೆ ಜಿಲ್ಲಾಧ್ಯಕ್ಷರು, ಇಂಡಿ