ವಿಜಯಪುರ ಜಿಪಂ ಸಿಇಓ ರಿಷಿ ಆನಂದ ಪ್ರಕಟಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಗಸ್ಟ್ ೧೫ ರಂದು ಜಿಲ್ಲೆಯ ಅಮೃತ ಸರೋವರದಲ್ಲಿ ತಿರಂಗಾ ರಾರಾಜಿಸಲಿದ್ದು, ಜನವರಿ ೨೬ ರಂದು ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಸ್ವಾತಂತ್ರ‍್ಯೋತ್ಸವ ದಿನಾಚರಣೆ, ಜೂನ್ ೫ರಂದು ಬರುವ ವಿಶ್ವ ಪರಿಸರ ದಿನ, ಜೂನ್ ೨೧ರ ಅಂತರಾಷ್ಟ್ರೀಯ ಯೋಗ ದಿನಾಚರಣೆಗಳಂದು ಅಮೃತ ಸರೋವರದ ದಡದಲ್ಲಿ ಅರ್ಥಪೂರ್ಣವಾಗಿ ಜಲ ಸಂರಕ್ಷಣಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ‍್ಯೋತ್ಸವ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಲಾಗುತ್ತಿದೆ. ಅದರಂತೆ ಈ ವರ್ಷ ಸಹ ಜಿಲ್ಲೆಯ ಎಲ್ಲಾ ಅಮೃತ ಸರೋವರಗಳಲ್ಲಿ ಸಡಗರದಿಂದ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೀಡಿರುವ ಅವರು, ಈ ಬಾರಿ ಒಂದು ಸರೋವರ-ಒಂದು ಸಂಕಲ್ಪ-ಜಲ ಸಂರಕ್ಷಣೆಗೆ ಎಂಬ ಧ್ಯೇಯ ವ್ಯಾಕ್ಯದಡಿ ಸ್ವಾತಂತ್ರ‍್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇದರ ಅಂಗವಾಗಿ ವಿಶೇಷವಾಗಿ ಈ ವರ್ಷ ಸಮುದಾಯದ ಪಾಲ್ಗೊಳ್ಳುವಿಕೆಗೆ ಹಾಗೂ ಕೆರೆಗಳನ್ನು ಸಮುದಾಯ ಕೇಂದ್ರಗಳಾಗಿ ಪರಿವರ್ತನೆಗೊಳಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಸ್ಥಳೀಯ ಸ್ವಾತಂತ್ರ‍್ಯ ಹೋರಾಟಗಾರರು, ಹುತಾತ್ಮರಾದ ಕುಟುಂಬ ಸದಸ್ಯರು, ಸ್ಥಳೀಯ ಪದ್ಮ ಪ್ರಶಸ್ತಿ ಪುರಸ್ಕೃತರು ಅಥವಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ಯಂತ ಹಿರಿಯ ನಾಗರಿಕರಿಂದ ಧ್ವಜಾರೋಹಣ ಮಾಡಿಸಲಾಗುವುದು.
ಜನಪ್ರತಿನಿಧಿಗಳು, ಸ್ವ-ಸಹಾಯ ಗುಂಪುಗಳು, ಯುವಕರು ಮತ್ತು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಪ್ರೇರೆಪಿಸುವುದು. ಜೊತೆಗೆ ಅವರ ಸಹಭಾಗಿತ್ವದಲ್ಲಿ ಗಿಡ ನೆಡುವುದು, ಸ್ವಚ್ಛತಾ ಅಭಿಯಾನ, ತ್ರಿವರ್ಣ ಯಾತ್ರೆ, , ಡ್ರೀನ್ ಲೈಟ್-ಸೌಂಡ್ ಶೋಗಳು, ಸ್ಥಳೀಯ ಶಿಲ್ಪಿಗಳ ಮೇಳ, ಸ್ವಾತಂತ್ರ‍್ಯ ಹೋರಾಟಗಾರರು ಅಥವಾ ಪದ್ಮ ಪುರಸ್ಕೃತರಿಂದ ಕಥನ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಈ ಬಾರಿಯ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಸಡಗರ ಸಂತೋಷದಿಂದ ಭಾಗವಹಿಸಿ ಕಾರ್ಯಕ್ರವನ್ನು ಅರ್ಥಪೂರ್ಣವಾಗಿಸುವಂತೆ ಅವರು ತಿಳಿಸಿದ್ದಾರೆ.