ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಅಧ್ಯಾತ್ಮದಲ್ಲಿ ನಂಬಿಕೆ ಮುಖ್ಯ. ವಿಜ್ಞಾನದಲ್ಲಿ ಮೂಲನಂಬಿಕೆ ಇರಬೇಕೆ ವಿನಹ ಮೂಢನಂಬಿಕೆ ಇರಬಾರದು. ಯಾವುದನ್ನು ಪ್ರಶ್ನಿಸಿದೆ ಒಪ್ಪಿಕೊಳ್ಳಬಾರದು. ಸರಿಯಾಗಿ ಪರಿಶೀಲಿಸಿ, ಪರೀಕ್ಷಿಸಿ ಸರಿಯಾದುದನ್ನು ಮಾತ್ರ ಒಪ್ಪಿಕೊಳ್ಳಬೇಕು ಎಂದು ಸರ್ಕಾರಿ ಪಿ.ಬಿ.ಪ.ಪೂ ಕಾಲೇಜಿನ ಉಪನ್ಯಾಸಕ ಡಾ.ಲಿಂಗಾನಂದ ಗವಿಮಠ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಮೂಲ ಸಿದ್ಧೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಹತ್ತೊಂಬತ್ತನೆ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ‘ನಂಬಿಕರೆದಡೆ ಓ ಎನ್ನನೆ ಶಿವನು? ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಯಾರು ಒಳ್ಳೆಯವರಾಗಿರುತ್ತಾರೆ ಅವರಿಗೆ ಒಳ್ಳೆಯದಾಗುತ್ತದೆ. ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಿಗೂ ಒಳ್ಳೆಯದಾಗುತ್ತದೆ. ಯಾರು ತಮ್ಮನ್ನು ತಾವು ಅರಿತುಕೊಳ್ಳುತ್ತಾರೆ ಅವರಿಗೆ ಎದುರಿಗೆ ಬರುವ ಮನುಷ್ಯರಲ್ಲಿಯೂ ದೇವರು ಕಾಣಲು ಸಾಧ್ಯ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಓಲೆಮಠದಿಂದ ನಡೆಯುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಜನಜಾಗೃತಿ ಕಾರ್ಯಕ್ರಮವಾಗಿದೆ. ಇದೊಂದು ಸಮಾಜ ಮತ್ತು ದೇಶ ಕಟ್ಟುವ ಕಾರ್ಯವಾಗಿದೆ. ಎಲ್ಲರೂ ಒಳ್ಳೆಯವರಾಗಿ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂಬುದು ಶ್ರೀಮಠದ ಉದ್ದೇಶವಾಗಿದೆ ಎಂದರು.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಭಗವಂತ ಏನಾದರೂ ಒಂದು ಇಟ್ಟು ಕಳಿಸಿರುವ ವೈಶಿಷ್ಟ್ಯವನ್ನು ಗುರುತಿಸಿಕೊಂಡು ಸದುಪಯೋಗ ಪಡಿಸಿಕೊಂಡರೆ ಸಾಧನೆ ಸಾಧ್ಯ. ನಂಬಿಕೆ ಇದ್ದರೆ ಯಾರದಾದರೂ ರೂಪದಲ್ಲಿ ಭಗವಂತ ಬಂದು ಕಷ್ಟಗಳಿಂದ ಪಾರು ಮಾಡುತ್ತಾನೆ ಎಂದು ಆಶೀರ್ವಚನ ನೀಡಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.