ಉದಯರಶ್ಮಿ ದಿನಪತ್ರಿಕೆ
ಚಡಚಣ: ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಹೊಂದಿರುವ ಶಿಕ್ಷಕ ಈ ಸಮಾಜದ ಶ್ರೇಷ್ಠ ವ್ಯಕ್ತಿ. ಅಂತಹ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಭೀಮಾಶಂಕರ ಸಕ್ಕರೆ ಕಾರ್ಖಾನೆ ಮರಗೂರ ನಿರ್ದೇಶಕ ಸಿದ್ದಣ್ಣಸಾಹುಕಾರ ಬಿರಾದಾರ ಅಭಿಪ್ರಾಯಪಟ್ಟರು.
ಚಡಚಣ ಪಟ್ಟಣದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಸುವರ್ಣಾ ಭೀಮಷ್ಯಾ ತೇಲಿ ಗುರುಮಾತೆ ಅವರ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿ ಸಮಾಜ ಸೇವೆ ಮಾಡಿದ ಶಿಕ್ಷಕರು ನಿವೃತ್ತಿಯಾಗುವುದು ಸೇವಾ ದಾಖಲೆಯಲ್ಲಿ ಮಾತ್ರವೇ ಹೊರತು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿಯೇ ಇರುವ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಉಪನ್ಯಾಸಕ ಶಿವಶರಣ ಹಂಜಗಿ ಮಾತನಾಡಿ, ಸುವರ್ಣಾ ತೇಲಿ ಅವರು ಉಮರಾಣಿಯಲ್ಲಿ 28 ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಶಿಕ್ಷಕರ ಶಿಕ್ಷಕ ಸಂಘಗಳ, ಹಾಗೂ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಮುಖ್ಯ ಅತಿಥಿ ಎಸ್ ಬಿ ಪಾಟೀಲ ಅವರು, ಸುವರ್ಣಾ ತೇಲಿ ಅವರ ತ್ಯಾಗ ಸಾಧನೆ ಕೊಂಡಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಸುವರ್ಣಾ ತೇಲಿ, ಶಿಕ್ಷಕರಿಗೆ ಮೊದಲು ತ್ಯಾಗ ಭಾವನೆ ಇರಬೇಕು. ತ್ಯಾಗ ಮಾಡಿದ ಶಿಕ್ಷಕ ಮಾತ್ರ ಶಿಕ್ಷಕ ಸಂಘಟನೆಯಲ್ಲಿ, ಶಿಕ್ಷಕ ವೃತ್ತಿಯಲ್ಲಿ ಹಾಗೂ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ನನ್ನ ಈ ಸಾಧನೆಗೆ ನನ್ನ ತಾಯಿ ಕಾರಣ. ಈ ಸನ್ಮಾನ ಮೊದಲು ನನ್ನ ತಾಯಿಗೆ ಸಲ್ಲಬೇಕು ಎಂದರು.
ಈ ಅಭಿನಂದನಾ ಸಮಾರಂಭ ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ಷಣ ಎಂದು ಭಾವುಕರಾದರು.
ಇದೇ ಸಂದರ್ಭದಲ್ಲಿ ಜುಲೈ 31 ಕ್ಕೆ ನಿವೃತ್ತಿ ಹೊಂದಿರುವ ಚಡಚಣ ತಾಲ್ಲೂಕಿನ ಎಲ್ಲ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತೇಲಿ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಸ್ ಸೋನಗಿ, ತಾಲ್ಲೂಕಿನ ವಿವಿಧ ನೌಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ನೌಕರ ಸಂಘದ ನಿರ್ದೇಶಕ ಸುನೀಲ ಯಳಮೇಲಿ ಸ್ವಾಗತಿಸಿದರು. ಶಿಕ್ಷಕ ರಮೇಶ ಮಲ್ಲಾಡಿ ಕಾರ್ಯಕ್ರಮ ನಿರೂಪಿಸಿದರು