ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶ ಭಕ್ತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಸಮಸ್ತ ಭಾರತೀಯರು ಮನೆಗಳ ಮೇಲೆ ತಿರಂಗ ಧ್ವಜ ಹಾರಿಸಬೇಕಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಸಿಂದಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಸ್ತುತ ದೇಶವು ಹಿಂದೆಂದಿಗಿಂತಲೂ ಸದೃಢವಾಗಿದೆ. ಬಿಜೆಪಿ ಸ್ನೇಹಕ್ಕೆ ಮತ್ತು ಪ್ರೀತಿಗೆ ಮುಂದಾಳತ್ವ ವಹಿಸುವ ಪಕ್ಷವಾಗಿದೆ. ದೇಶ ಭಕ್ತಿಯ ಮೂಲಕ ಸ್ವಾತಂತ್ರ್ಯ ಕಾಪಾಡುವುದು ಮೊದಲ ಆಶಯವಾಗಿದೆ. ಆಪರೇಶನ್ ಸಿಂಧೂರ ಮತ್ತು ಆಪರೇಶನ್ ಮಹಾದೇವ ಯಶಸ್ಸಿಗೆ ಕಾರಣರಾದ ದೇಶದ ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಆ.13ರಿಂದ 15ರವರೆಗೆ ದೇಶದ ಎಲ್ಲಡೆ ಹರ್ ಘರ್ ತಿರಂಗ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಈ ವೇಳೆ ಅಭಿಯಾನದ ಮೂಲಕ ಬೈಕ್ ರ‍್ಯಾಲಿ ನಡೆಸಿ ಪಟ್ಟಣದ ಬಸವೇಶ್ವರ ವೃತ್ತದಿಂದ, ಸ್ವಾಮಿ ವಿವೇಕಾನಂದ ವೃತ್ತ, ತೋಂಟದ ಸಿದ್ದಲಿಂಗ ಶ್ರೀಗಳ ರಸ್ತೆಯ ಮಾರ್ಗವಾಗಿ, ಟಿಪ್ಪು ಸುಲ್ತಾನ್ ವೃತ್ತ, ಅಂಬೇಡ್ಕರ್ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಸಂಚರಿಸಿ ತಿರಂಗದ ಕುರಿತು ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಶ್ರೀಶೖಲಗೌಡ ಬಿರಾದಾರ ಮಾಗಣಗೇರಿ, ಎಸ್ಟಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ, ಸಿದ್ದು ಬುಳ್ಳಾ, ಅಶೋಕ ನಾರಾಯಣಪೂರ, ಪೀರು ಕೆರೂರ, ವಿಠ್ಠಲ ನಾಯ್ಕೋಡಿ, ಮಡಿವಾಳಪ್ಪಗೌಡ ಬಿರಾದಾರ, ಶ್ರೀಶೈಲ ಚಳ್ಳಗಿ, ಸಮೀ ಬಿಜಾಪುರ, ಸೇರಿದಂತೆ ದೇಶಭಕ್ತರು ಭಾಗವಹಿಸಿದ್ದರು.