ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
ವ್ಯಕ್ತಿ ಪೂಜೆ ಬೇಕೇ..?? ಮಾನವರೇ ದೇವರಾದರೆ ದೇವರ ಅಸ್ತಿತ್ವಕ್ಕೆ ಬೆಲೆ ಎಲ್ಲಿ..?! ಎಂದು ಕೇಳುತ್ತಾರೆ ನಮ್ಮ ದೊಡ್ಡವರು
ಬೇಕು ಎನ್ನುತ್ತೇನೆ ನಾನು. ಅದರೆ ವ್ಯಕ್ತಿಗಲ್ಲ, ದೇವರಂತಹ ವ್ಯಕ್ತಿಗೆ. ಮನುಷ್ಯ ದೇವರಾಗಿಬಿಡಬೇಕು ತನ್ನ ಉತ್ತಮ ಯೋಚನೆಗಳಿಂದ, ಉತ್ತಮ ಕೆಲಸಗಳಿಂದ.
ಇನ್ನು ದೇವರೆಂದರೆ ಯಾರು? ನೀವು ರಾಮ, ಕೃಷ್ಣ, ಅಲ್ಲಾ, ಯೇಸು ಇವರೆಲ್ಲರೂ ದೇವರೆಂದರೆ, ನಾನು ಮನುಷ್ಯನಲ್ಲಿರಬೇಕಾದ ಒಳ್ಳೆಯತನವನ್ನೇ ದೇವರೆನ್ನುತ್ತೇನೆ. ದೇವರು ಒಬ್ಬೊಬ್ಬರಿಗೆ ಒಂದೊಂದು ರೂಪ. ಅವರವರ ಅಸ್ಮಿತೆಗೆ ಬಿಟ್ಟಂತೆ.

ಆದರೆ ದೇವರು ಎಂಬ ಪದದ ತೂಕ ಮಾತ್ರ ಬಲು ಎತ್ತರದ್ದು. ಯಾರಿಗೂ ನಿಲುಕದ್ದು. ಅಷ್ಟೆಲ್ಲಾ ಒಳ್ಳೆಯವರಾಗಿ ಬಾಳಿದ ಪಾಂಡವರೇ, ಸ್ವರ್ಗಕ್ಕೆ ಹೋಗಿ ಸೇರುವಷ್ಟು ಪುಣ್ಯ ಸಂಪಾದನೆ ಮಾಡಲಾಗಲಿಲ್ಲ. ಸ್ವರ್ಗಕ್ಕೆ ಹೋಗುವ ದಾರಿಯಲ್ಲೇ, ಹೋಗುತ್ತಲೇ ಪ್ರಾಣ ಬಿಟ್ಟವರು. ಇನ್ನೂ ನಾವು-ನೀವು ಎಲ್ಲಿಯವರು?
ಹುಲು ಮಾನವರು ದೇವರಾಗಬಾರದೆಂದಿಲ್ಲ, ಆಗಬಹುದು ಅದು ಅವರ ಒಳ್ಳೆಯ ಕೆಲಸಗಳಿಂದ. ಆದರೆ ಒಳ್ಳೆಯವರನ್ನು ಪೂಜಿಸುವವರು ಬೇಕಲ್ಲಾ!ಯಾರಿದ್ದಾರೆ?!.
ಇರುವವರೆಲ್ಲಾ ಅರ್ಹರಲ್ಲದ ವ್ಯಕ್ತಿಪೂಜೆಯಲ್ಲಿ ನಿರತರಾಗಿಬಿಟ್ಟಿದ್ದಾರೆ. ಊರತುಂಬಾ ಹರಡಿಕೊಂಡಿರುವ ಅನರ್ಹರು, ಅಲ್ಲಲ್ಲೇ ಇರುವ ಸಜ್ಜನರ ಉಪಯೋಗ ಇತರರಿಗೆ ಸಿಗುವುದಕ್ಕೆ ಬಿಡುವುದೇ ಕಷ್ಟ. ಹೇಗೆ ಅಂತೀರಾ ಪಾಪಾಸುಕಳ್ಳಿ ಹಣ್ಣಿನ ಹಾಗೆ. ಪಾಪಾಸುಕಳ್ಳಿ ಹಣ್ಣು ಸಹ ಹಣ್ಣೇ. ಆದರೆ ಮೈ ಮೇಲೆಲ್ಲಾ ಮುಳ್ಳು ತಿನ್ನುವುದಾದರೂ ಹೇಗೆ?!. ಕೆಲವೇ ಕೆಲವು ಸಜ್ಜನರು ಆ ಹಣ್ಣು. ಆ ಹಣ್ಣಿನ ಮೇಲೂ ಸಹ ಮುಳ್ಳಿನ ದಾಳಿ.
ಇನ್ನು ಸಜ್ಜನರಂತೆ ಕಾಣುವವರ ಬಗ್ಗೆ ಹೇಳುವುದಾದರೆ, ಅವರು ಹತ್ತಿಯ ಹಣ್ಣು. ಒಳಗಿರುವ ಹುಳಗಳು ಕಾಣಿಸೋದೇ ಇಲ್ಲಪ್ಪ. ಸುಮ್ಮನೆ ಹಣ್ಣು ಅಷ್ಟೇ.
ಅಲ್ಲಿ ರುಚಿಯಾದ ಪಾಪಾಸುಕಳ್ಳಿ ಹಣ್ಣನ್ನು ತಿನ್ನಲು ಅದರ ಮೇಲಿರುವ ಮುಳ್ಳುಗಳು ಬಿಡುವುದಿಲ್ಲ, ಇಲ್ಲಿ ಸುಂದರವಾಗಿ ಕಾಣುವ ಹತ್ತಿ ಹಣ್ಣು ತಿನ್ನಲು ಯೋಗ್ಯವೇ ಇರುವುದಿಲ್ಲ. ಇದು ನಮ್ಮ ಸಮಾಜದ ದುರ್ಗತಿ.
ಅಯ್ಯೋ ಅದೆಲ್ಲ ಬಿಡಿ, ಬನ್ನಿ ನಮ್ಮ ವ್ಯಕ್ತಿ ಪೂಜೆಯ ದುರ್ಗತಿ ನೋಡೋಣ:
ಅದೇನೋ ಸಮಾವೇಶ ಅಂತೆ ಕಣ್ರೀ. ಅವ, ಅವರ ದೇವರಂತೆ… ಅದಕ್ಕೆ ತಲಾ 500 ಕೊಡ್ತಾರಂತೆ, ಜನಸಾಮಾನ್ಯರಿಗೆ ತೊಂದರೆ ಆದರೂ ಪರವಾಗಿಲ್ಲ ಅಂತ ksrtc ಬಸ್ಸುಗಳನ್ನ ಹಳ್ಳಿಗೆ ಕಳಿಸ್ತಾರಂತೆ ಅದಕ್ಕೆ ಆ ಜನರೆಲ್ಲಾ ಬಂದು ಸೇರ್ತಾರಂತೆ. ಹಣ ಕೊಡ್ತಾರಲ್ಲ. ಅವ, ಅವರ ದೇವರಂತೆ.
ಮತ್ತೇನೋ ಮೈಸೂರು ಪೇಟ ಅಂತೆ. ಹೆಂಗೆ ಹೇಳಿ ಡಿಸೈನ್ ಡಿಸೈನ್. ಸಿಕ್ಕಸಿಕ್ಕದವರಿಗೆಲ್ಲ. ನನಗೂ ಹಾಕಿದ್ರು ನಾ ಯಾವಾಗ ಮೈಸೂರು ಮಹಾರಾಣಿ ಆದೆ ಅಂತ ಗೊತ್ತೇ ಆಗ್ಲಿಲ್ಲ. ಬದಲಿಗೆ ಒಂಚೂರು ಹಣ್ಣು ಕೊಟ್ಟಿದ್ರೆ ಹೊಟ್ಟೆಗಾದ್ರೂ ತಿನ್ನಬಹುದಿತ್ತು. ಅಯ್ಯೋ ಇಲ್ವಂತೆ, ಅದು ಫೋಟೋಗೆ ಕಾಣಿಸೋಲ್ವಂತೆ ಅದಕ್ಕೆ, ಅಷ್ಟೇಲ್ಲಾ ಕಷ್ಟಪಟ್ಟು ಸಂಸ್ಥಾನ ಕಟ್ಟಿದ, ಮೈಸೂರು ಒಡೆಯರ ತಲೆಮೇಲೆ ಇರಬೇಕಾದ ಪೇಟವನ್ನು ಸಿಕ್ಕ ಸಿಕ್ಕಿದವರಿಗೆಲ್ಲಾ ಹಾಕ್ತಾರಂತೆ, ಅವರೆಲ್ಲ ರಾಜರಂತೆ. ಅಷ್ಟೇ ಅಲ್ಲ ರಾಣಿಯರೂ ಹೌದಂತೆ.
ಮತ್ತೊಂದು ಗೊತ್ತಾ?! ಯಾರು ಫೇಮಸ್ ಆಗಿರ್ತಾರೋ ಅವರೇನು ಹೇಳಿದ್ರೂ ಸೈ ಅಂತೆ. ಎಲ್ಲಾ ಕುರಿಗಳು ಅವರ ಕಡೆಗೇನೇ ಇರುತ್ತಾವಂತೆ. ಸರೀನೋ ತಪ್ಪೋ ಒಟ್ಟಿನಲ್ಲಿ ಅವರಿಗೆ ಜೈ. ಯಾಕಂದ್ರೆ ಇವರದೂ ಬೇಳೆ ಬೇಯಿಸಿಕೊಳ್ಳೋದು ಬೇಡ್ವಾ?! ಕೊನೆಯಪಕ್ಷ ಇವರಿಗೆ ಉಳಿಗಾಲವಾದರೂ ಬೇಕಲ್ಲ! ಹಾಗಾಗಿ ಜೈ ಎನ್ನಲೇಬೇಕು.
ಇಷ್ಟು ಸಾಕು ಬಿಡಿ. ‘ಮಾಡಿದವರ ಪಾಪ ಆಡಿದವರ ಬಾಯಲ್ಲಿ’ ಸುಮ್ಮನೆ ಯಾಕೆ. ಮತ್ತೆ ಅವರಿಗೆ ಬೇಸರವಾಗಿಬಿಟ್ಟೀತು.
