ಉದಯರಶ್ಮಿ ದಿನಪತ್ರಿಕೆ
ಬಸವನ ಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮಠವನ್ನು ತಳಿರು ತೋರಣ ಹಾಗೂ ವಿಶೇಷವಾದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಅರ್ಚಕ ಶ್ರೀವಾದಿರಾಜಾಚಾರ್ಯ ಯಜುರ್ವೇದಿ ಅವರ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ಕ್ಷೀರಾಭಿಷೇಕ, ತುಳಸಿ ಅರ್ಚನೆ, ವಿಶೇಷ ಅಲಂಕಾರ ಹಾಗೂ ಅಷ್ಟೋತ್ತರ ಮುಂತಾದ ಕಾರ್ಯಕ್ರಮಗಳು ನಡೆದವು. ನಂತರ ವೇ.ಮೂ. ನರಹರಿ ಆಚಾರ್ಯ ಜೋಶಿ ಮುತ್ತಗಿ ಅವರಿಂದ ಪ್ರವಚನವನ್ನು ಏರ್ಪಡಿಸಲಾಗಿತ್ತು.ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ನಡೆಸಲಾಯಿತು. ಪ್ರತಿದಿನ ಸಾಯಂಕಾಲ ಪಂಚ ಸುಳಾದಿ, ಪಲ್ಲಕ್ಕಿ ಉತ್ಸವ, ಸಂಗೀತ ಸೇವೆ, ಅಷ್ಟಾವಧಾನ ಸೇವೆ, ತೊಟ್ಟಲು ಸೇವೆ ಹಾಗೂ ಸ್ವಸ್ತಿವಾಚನಗಳು ಜರುಗಿದವು.
ಉತ್ತರಾರಾಧನೆಯ ದಿನ ವೈಭವದ ಜಯಘೋಷ ಹಾಗೂ ಭಜನೆಯೊಂದಿಗೆ ರಥೋತ್ಸವ ನಡೆಯಿತು. ಬಳಿಕ ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ಅವರು ಮಾತನಾಡಿ, ರಾಯರ ಪಾದೋದಕ ಮತ್ತು ಮೃತ್ತಿಕೆಗಳಿಗೆ ಅದ್ಭುತ ಶಕ್ತಿ ಇದೆ. ತನ್ಮೂಲಕ ಎಲ್ಲರಿಗೂ ರಾಯರ ಆಶೀರ್ವಾದ ಸಿಗುವಂತಾಗಲಿ. ಎಲ್ಲ ಭಕ್ತರ ಅಭೀಷ್ಠೆಗಳನ್ನೂ ಈಡೇರಿಸಲಿ ಎಂದು ರಾಯರಲ್ಲಿ ಪ್ರಾರ್ಥಿಸಿದರು.
ಮೂರು ದಿನಗಳ ಅನ್ನಸಂತರ್ಪಣೆ ಹಾಗೂ ಸಮಸ್ತ ಸೇವಾ ಕೈಂಕರ್ಯಗಳನ್ನು ಸದ್ಭಕ್ತರಾದ ಎ.ಆರ್.ಕುಲಕರ್ಣಿ, ಅನೀಲ ಕುಲಕರ್ಣಿ, ಆನಂದ ಕುಲಕರ್ಣಿ, ವಿನಾಯಕ ದೇಶಪಾಂಡೆ, ಕುಲಕರ್ಣಿ ಪರಿವಾರ (ಮರ್ಚೆಂಟ್), ಎಂ.ಜಿ.ಕುಲಕರ್ಣಿ ಹಾಗೂ ಸಂತೋಷ ಕುಲಕರ್ಣಿ, ನೀಲು ನಾಯಕ ಇವರು ವಹಿಸಿದ್ದರು. ಕಮೀಟಿಯ ಎಲ್ಲ ಪದಾಧಿಕಾರಿಗಳು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಭಕ್ತವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು.