ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಪ.ಪಂ. ಹಾಗೂ ತಲಶೀಲ್ದಾರ ಕಛೇರಿ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಧಿಡೀರ ದಾಳಿ ನಡೆಸಿ, ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು.
ಪ.ಪಂ. ಕಛೇರಿಯಲ್ಲಿ ೨೦೨೩-೨೪, ೨೦೨೪-೨೫ನೇ ಸಾಲಿನಲ್ಲಿ ಭೂಪರಿವರ್ತನೆ (ಎನ್.ಎ.) ಆಗಿರುವ ಜಮೀನುಗಳ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿ, ಅದರ ಸಂಪೂರ್ಣ ಮಾಹಿತಿಯನ್ನು ಪಡೆದ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ಎಲ್ಲ ಭೂಪರಿವರ್ತನೆ ಕಡತಗಳ ನಕಲು ಪ್ರತಿಯನ್ನು ಪಡೆದರು. ಇತ್ತಿಚೆಗೆ ಪಟ್ಟಣದ ಹೊರವಲಯದಲ್ಲಿ ಭೂಪರಿವರ್ತನೆಯಾಗಿರುವ ಡೈಮಂಡ ಪಾರ್ಕನ ಸುಮಾರು ೪೦ ಎಕರೆ ಸಿಟಿ ಸರ್ವೆಯಲ್ಲಿ(ಪ.ಪಂಚಾಯತಿ ಸರಹದ್ದಿನಲ್ಲಿ) ಬರುವದಿಲ್ಲ ಮತ್ತು ಅದರಲ್ಲಿ ಈಗಾಗಲೇ ೪೦% ನಿವೇಶನಗಳ ಉತಾರಿಯನ್ನು ಪ.ಪಂ.ನವರು ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಣೆ ಮಾಡಿದಾಗ ಲೋಕಾಯುಕ್ತ ಅಧಿಕಾರಿಗಳು ಇದರ ಕುರಿತು ಪ.ಪಂ.ನ ಮುಖ್ಯಾಧಿಕಾರಿಯನ್ನು ವಿಚಾರಿಸಿ, ಹೆಚ್ಚಿನ ಮಾಹಿತಿಗಾಗಿ ಈ ಭೂಪರಿವರ್ತನೆ ಕಡತದ ನಕಲು ಪ್ರತಿಯನ್ನು ನೀಡುವಂತೆ ಸೂಚಿಸಿದರು.
ನಂತರ ಪ.ಪಂ.ನ ಎಲ್ಲ ವಾಹನಗಳ ಲಾಗ್‌ಬುಕ್ ಪರಿಶೀಲನೆ ನಡೆಸಿ, ಅದರ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿ ಪರಿಶೀಲನೆ ನಡೆಸಿದರು. ಪ.ಪಂ.ನಲ್ಲಿ ಒಟ್ಟು ೮ ವಾಹನಗಳು ಇದ್ದು ಅವುಗಳಲ್ಲಿ ಕೇವಲ ೪ ವಾಹನಗಳು ಮಾತ್ರ ಚಾಲನೆಯಲ್ಲಿವೆ ಎಂದು ಪ.ಪಂ. ಸಿಬ್ಬಂದಿ ಮಾಹಿತಿ ನೀಡಿದರು.
ಪ.ಪಂ.ಗೆ ಸಂಬಂಧಿಸಿದ ಜೆ.ಸಿ.ಬಿ.ಯ ಇಂಧನದ ರಶೀದಿ, ಕಾಮಗಾರಿಗಳ ಬಗ್ಗೆ ಲಾಗ್‌ಬುಕ್‌ನಲ್ಲಿ ದಾಖಲಿಸದೇ ಇರುವುದು ಕಂಡುಬಂತು. ನಂತರ ೨ ವರ್ಷಗಳ ಸಂಪೂರ್ಣ ಲೆಕ್ಕಪರಿಶೋಧನಾ ವರದಿಯನ್ನು ಪರಿಶೀಲಿದ ಅವರು, ಲೆಕ್ಕಪರಿಶೋಧನಾ ಸಮಯದಲ್ಲಿ ಲಾಗ್‌ಬುಕ್‌ನಲ್ಲಿ ದಾಖಲಿಸದೇ ಇರದ ವಾಹನಗಳ ಇಂಧನ ಖರ್ಚುವೆಚ್ಚಗಳನ್ನು ಹೇಗೆ ಪರಿಶೋಧನೆ ಮಾಡಿ ಲೆಕ್ಕಪರಿಶೋಧನಾ ವರದಿಯನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಎರಡು ವರ್ಷಗಳ ಅವಧಿಯಲ್ಲಿನ ವಾಹನ ಇಂಧನ ಸಂಪೂರ್ಣ ಮಾಹಿತಿಯನ್ನು ಲಾಗ್‌ಬುಕ್‌ನಲ್ಲಿ ದಾಖಲಿಸದೆ ಇರದ ಕಾರಣ ಅದರ ಸಂಪೂರ್ಣ ವಿವರಗಳನ್ನು ಬೆಳಗಾವಿಯ ಲೋಕಾಯುಕ್ತ ಕಛೇರಿಗೆ ಬಂದು ವರದಿ ನೀಡುವಂತೆ ಪ.ಪಂ. ಮುಖ್ಯಾಧಿಕಾರಿಗಳಿಗೆ ಹೇಳಿದರು.
ಅರ್ಜುನ ಕಾಂಬಳೆ ಎಂಬ ನಿವರಗಿ ಗ್ರಾಮದ ನಿವಾಸಿ ತನ್ನ ಮನೆಗೆ ಹೋಗಲು ರಸ್ತೆ ಇರದೆ ಇರುವದು ಹೇಳಿದಾಗ ಗ್ರಾಮಗಳ ಮನೆಗಳಿಗೆ ಹೋಗಲು ರಸ್ತೆಗೆ ಸಂಬಂಧಿಸಿದ ತಾ.ಪಂ.ಅಧಿಕಾರಿ ಸಂಜಯ ಇಂಗಳೆ ಅವರಿಗೆ ಫೋನ ಮುಖಾಂತರ ಮಾತನಾಡಿದ ಅಧಿಕಾರಿಗಳು ಕೂಡಲೆ ಪಿಡಿಓ ಗೆ ಹೇಳಿ ಅಥವಾ ಖುದ್ದಾಗಿ ರಸ್ತೆಯ ಅನುಕೂಲ ಮಾಡಿ ಕೊಡುವಂತೆ ಸೂಚಿಸಿದರು.
ತಹಶೀಲ್ದಾರ ಕಛೇರಿ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಆರ್.ಟಿ.ಎ. ಆರ್.ಟಿ.ಎಸ್. ಮ್ಯುಟೇಶನ್ ಕುರಿತ ದಾಖಲೆ, ವಾರಸಾ, ಭೋಜಾ, ಜಮೀನುಗಳ ವ್ಯಾಜ್ಯ ಕುರಿತಂತೆ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿದ ಅವರು, ಪಡಿತರ ಚೀಟಿ ರದ್ದಾದ ಕುರಿತು ವಿವರವನ್ನು ಪಡೆದರು. ಕಛೇರಿಯ ಕೆಲಸಗಳ ವಿಳಂಬಕ್ಕೆ ಕಾರಣ ಕೇಳಿದ ಅವರು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪಿ.ಎಸ್.ಐ.ಗಳಾದ ಭೀಮನಗೌಡ ಬಿರಾದಾರ, ನಿರಂಜನ ಪಾಟೀಲ ಸೇರಿದಂತೆ ಬಾಗಲಕೋಟ, ಬೆಳಗಾವಿಯ ಸಿಬ್ಬಂದಿಗಳು ಇದ್ದರು.