ಸರ್ಕಾರದ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಲು ವಾರ್ತಾ ಇಲಾಖೆಯಿಂದ ಬೀದಿನಾಟಕ-ಜಾನಪದ ಕಲಾ ತಂಡಗಳ ಆಯ್ಕೆ | ಸಹಾಯಕ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರ ಜಾರಿಗೊಳಿಸಿರುವ ಪಂಚಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಜನಪ್ರಿಯ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ವಾರ್ತಾ ಇಲಾಖೆಯಿಂದ ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅವರು, ಸರ್ಕಾರದ ಪಂಚ ಗ್ಯಾರಂಟಿಗಳ ಯೋಜನೆ ಮತ್ತು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಮನವರಿಕೆ ಮಾಡಿಕೊಡುವಲ್ಲಿ ಬೀದಿ ನಾಟಕ ಹಾಗೂ ಜಾನಪದ ಕಲಾತಂಡಗಳ ಪಾತ್ರ ಬಹುಮುಖ್ಯವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಭಾಗವಾಗಿಯೇ ವಿವಿಧ ಕಲಾ ತಂಡಗಳನ್ನು ಆಯ್ಕೆ ಮಾಡಿ, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಕಲಾ ತಂಡಗಳು ಕಲೆಯೊಂದಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯ ಕಲೆ ಅಭಿವ್ಯಕ್ತಪಡಿಸುವ ಮೂಲಕ ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ಬೆಳಗಾವಿಯ ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀಕ್ಷಕರಾದ ಶ್ರೀಮತಿ ಶ್ರೀದೇವಿ ಹಲಸಂಗಿ, ಸಮಾಜ ಕಲ್ಯಾಣ ಇಲಾಖೆಯ ಎಂ.ಎಲ್.ಮನ್ನಾಭಾಯಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಮಂಜುಳಾ ದುರಗನ್ನವರ, ಸುರೇಶ ಅಂಬಿಗೇರ, ವೈಷ್ಣವಿ, ಪ್ರಶಿಕ್ಷಣಾರ್ಥಿ ವಿದ್ಯಾಶ್ರೀ ಹೊಸಮನಿ, ಪ್ರಕಾಶ ಘಟಕಾಂಬ್ಳೆ, ಸಾಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಬೀದಿ ನಾಟಕ ಕಲಾ ತಂಡ ಹಾಗೂ ಜಾನಪದ ಕಲಾ ತಂಡಗಳ ಕಲಾವಿದರು ಉಪಸ್ಥಿತರಿದ್ದರು.

ವಾರ್ತಾ ಇಲಾಖೆಯ ಆವರಣದಲ್ಲಿ ಕಲಾವಿದರ ಕಲರವ
ಬೀದಿ ನಾಟಕ ಹಾಗೂ ಜಾನಪದ ಕಲಾತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಲಾವಿದರ ಕಲರವ
ವಾರ್ತಾ ಇಲಾಖೆಯ ಆವರಣದಲ್ಲಿ ಕಂಡು ಬಂತು.
ಗಿಡ ಮರಗಳಿಂದ ಕೂಡಿದ ಹಸಿರು ಹೊದಿಕೆಯ ನಿಸರ್ಗದ ವಾತಾವರಣದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ೧೧ ಕಲಾ ತಂಡಗಳು ತಮ್ಮ ಕಲಾಪ್ರಕಾರಗಳ ಪ್ರದರ್ಶನ ನೀಡಿದರು.

“ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳನ್ನು ಆಯ್ಕೆ ಮಾಡಿ, ಆಯ್ಕೆಯಾದ ಕಲಾ ತಂಡಗಳು ಜಿಲ್ಲೆಯ ವಿವಿಧೆಡೆ ಸಂಚರಿಸಿ, ಬೀದಿ ನಾಟಕ ಹಾಗೂ ಜಾನಪದ ಸಂಗೀತದ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿವೆ.”
– ಅಮರೇಶ ದೊಡಮನಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರು, ವಿಜಯಪುರ