ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳೀಯ ಶ್ರೀ ಸಂಗಮೇಶ್ವರ ಬಾಲಕ, ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ರಕ್ಷಾ ಬಂಧನದ ಹಬ್ಬವನ್ನು ಗಿಡಗಳಿಗೆ ರಾಖಿ ಕಟ್ಟುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಗುರು ಎಚ್ ಆರ್ ಬಗಲಿ, ಪ್ರತಿಯೊಬ್ಬ ಸಹೋದರ ಸಹೋದರಿಯರು ಇದೆ ರೀತಿ ಒಂದೊಂದು ಗಿಡಗಳಿಗೆ ರಾಖಿ ಕಟ್ಟಿ ದತ್ತು ತೆಗೆದುಕೊಂಡು ಸರಿಯಾಗಿ ಬೆಳೆಸಿದರೆ, ಪರಿಸರ ಸಂರಕ್ಷಣೆ ಆಗುತ್ತದೆ ಅಲ್ಲದೆ ಮಾಲಿನ್ಯ ನಿಯಂತ್ರಣ ಸಹ ಆಗುತ್ತದೆ. ಇಂತಹ ಕಾರ್ಯಕ್ರಮಗಳು ನಡೆದರೆ ಪ್ರತಿಯೊಬ್ಬರಿಗೂ ಪರಿಸರ ಸಂರಕ್ಷಣೆಯ ಅರಿವು ಮೂಡುತ್ತದೆ. ರಾಖಿ ಕಟ್ಟಿದ ಸಹೋದರಿಯ ಸಂರಕ್ಷಣೆಯ ಜವಾಬ್ದಾರಿ ಸಹೋದರ ಹೇಗೆ ತೆಗೆದುಕೊಳ್ಳುತ್ತಾನೆ ಹಾಗೆ ಗಿಡಗಳಿಗೆ ರಾಖಿ ಕಟ್ಟಿ ಅವುಗಳ ಸಂರಕ್ಷಣೆ ಹೊಣೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಪರಿಸರ ಸಂರಕ್ಷಣೆಯೂ ಆಗುತ್ತದೆ ಮತ್ತು ಮಾಲಿನ್ಯ ಆಗುವುದಿಲ್ಲ ಅಲ್ಲದೆ ಮಳೆಯೂ ಚೆನ್ನಾಗಿ ಆಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಶರಣ ನೂಲಿಚೆಂದಯ್ಯನವರ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನೂಲಿ ಚೆಂದಯ್ಯನವರ ಕುರಿತು ಅನೇಕ ಮಕ್ಕಳು ಮಾತನಾಡಿದರು.
ಸಹ ಶಿಕ್ಷಕ ಎಸ್ ಜಿ ಉಮರಾಣಿಯವರು ಅವರ ಜೀವನ ಚರಿತ್ರೆ ಕುರಿತು ಸವಿವರವಾಗಿ ತಿಳಿಸಿದರು.
ಶಿಕ್ಷಕರಾದ ಜೆ ಪಿ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಮು.ಗುರು ಎಚ್ ಆರ್ ಬಗಲಿಯವರು ಸಮಾರೋಪ ಭಾಷಣ ಮಾಡಿದರು.
ಸ.ಶಿ.ಶ್ರೀಮತಿ ವಿದ್ಯಾ ಕಲ್ಯಾಣ ಶೆಟ್ಟಿ ನಿರೂಪಿಸಿದರು. ಸ.ಶಿ. ಗವಾನಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಎರಡೂ ಶಾಲೆಗಳ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಅಲ್ಲದೆ ಬಿ.ಇಡಿ ಕಲಿಕಾರ್ಥಿಗಳು ಭಾಗವಹಿಸಿದ್ದರು.