ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಅಂಗನವಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ‘ಬಾಲಮೇಳ’ ಒಂದು ಉತ್ತಮ ವೇದಿಕೆಯಾಗಿದೆ ಎಂದು ಉಪನಿರ್ದೇಶಕ ಕೆ.ಕೆ.ಚವ್ಹಾಣ ತಿಳಿಸಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಎಂಪಿಎಸ್, ಕೆಜಿಎಸ್ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಂದಗಿ ಹಾಗೂ ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ಜರುಗಿದ ಬಾಲಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲಮೇಳ ಆಯೋಜನೆಯಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸಿಡಿಪಿಓ ಎಸ್.ಎನ್.ಹಿರೇಮಠ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೌದ್ಧಿಕ, ಶಾರೀರಕ, ಮಾನಸಿಕ, ಕ್ರಿಯಾತ್ಮಕ ಚಟುವಟಿಕೆಗಳು ಸೇರಿದಂತೆ ನೈತಿಕ ಮೌಲ್ಯಗಳ ಕುರಿತು ತಿಳಿಸಿಕೊಡಲಾಗುವದು. ಆದ್ದರಿಂದ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಲ್ಲಿ ದಾಖಲಿಸಲು ತಿಳಿಸಿದರು.
ಗ್ರಾಮದ ಎಲ್ಲ ಅಂಗನವಾಡಿ ಮಕ್ಕಳು ಚಿತ್ರಕಲೆ, ಕಿರುನಾಟಕ, ಸಂಗೀತ, ನೃತ್ಯ, ವೇಷಭೂಷಣ ಸೇರಿದಂತೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಭಾಷಾ, ದೈಹಿಕ, ಬೌದ್ಧಿಕ, ಕ್ರಿಯಾತ್ಮಕ, ಸಾಮಾಜಿಕ ಹಾಗೂ ಭಾವನಾತ್ಮಕ ಹಂತದ ಬೆಳವಣಿಗೆಯ ಕುರಿತಾದ ಮಾಹಿತಿ ಹಾಗೂ ಪ್ರದರ್ಶನಕ್ಕಾಗಿ ವಿಶೇಷ ಸ್ಟಾಲ್‌ಗಳನ್ನು ನಿರ್ಮಿಸಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಎಸಿಡಿಪಿಒ ಪುಷ್ಪಾವತಿ ಬಿರಾದಾರ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಜಿಲ್ಲಾ ಸಂಯೋಜಕ ಹರೀಶ್, ತಾಲ್ಲೂಕು ಸಂಯೋಜಕ ಸಂತೋಷ, ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ ಛಾಯಾಗೋಳ, ಶೇಖರಗೌಡ ಪಾಟೀಲ, ಬಾಪುಗೌಡ ಬಿರಾದಾರ, ಉಜ್ವಲ ಸಂಸ್ಥೆಯ ಸಂಯೋಜಕ ಸಾಗರ ಘಾಟಗೆ, ವಲಯ ಮೇಲ್ವಿಚಾರಕಿಯರಾದ ಶಹಜಾದ ಕಾಗಲ್, ಶಾಂತಾ ನಾಯಕ್, ಆರ್.ಬಿ.ಟಕ್ಕಳಕಿ ಹಾಗೂ ಕೋರವಾರ ಎ.ಬಿ ವಲಯಗಳ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.