ಚಿರ್ಚಿನಕಲ್ಲ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಾ ಕಲೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶಿಕ್ಷರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಶಾಲಾ ಸೌಂದರ್ಯ ಮತ್ತು ಸುತ್ತಮುತ್ತಲಿನ ವಾತಾವರಣವನ್ನು ಅಚ್ಚುಕಟ್ಟಾಗಿಟ್ಟುಕೊಳ್ಳುವ ಮನೋಭಾವ ಬಂದಲ್ಲಿ ಆ ಶಾಲೆ ಮಾದರಿಯ ಶಾಲೆಯಾಗಿ ಹೊರಹೊಮ್ಮುವದು ಎಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ತಾಲೂಕಿನ ಚಿರ್ಚಿನಕಲ್ಲ ಗ್ರಾಮದ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾ ಕಲೋತ್ಸವ ಹಾಗೂ ಶಾಲಾ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯ ಶಿಕ್ಷಕರ ಆಯ್ಕೆ ಪ್ರಕ್ರೀಯೆಯಲ್ಲಿ ಸರ್ಕಾರ ಸಾಕಷ್ಟು ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿರುತ್ತದೆ. ಪ್ರತಿಭಾನ್ವಿತ ಶಿಕ್ಷಕರು ಮಾತ್ರ ಸರ್ಕಾರಿ ಶಾಲೆಯ ಶಿಕ್ಷಕರಾಗಲು ಸಾಧ್ಯ. ಆದರೆ ಸಧ್ಯದ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳತ್ತ ಪಾಲಕರು ಮುಖಮಾಡುತ್ತಿರುವದು ನೋವಿನ ಸಂಗತಿ. ಸಾರ್ವಜನಿಕರು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಲು ಮುಂದಾಗಿಸಬೇಕೆ ಹೊರತು ಖಾಸಗಿ ಶಾಲೆಗಳ ಮೊರೆ ಹೋಗಬಾರದು ಅಂದಾಗ ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರಿ ಸೌಲಭ್ಯಗಳೂ ಕೂಡ ದೊರೆಯುತ್ತವೆ ಎಂದರು.
ಬೆಳಗಾವಿಯ ನಿವೃತ್ತ ಡಿಡಿಪಿಐ ಎಸ್.ಡಿ.ಗಾಂಜಿ, ತಾಪಂ ಇಓ ಎನ್.ಎಸ್.ಮಸಳಿ, ಬಿಇಓ ಬಿ.ಎಸ್.ಸಾವಳಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಮುದ್ನೂರ, ಕಾರ್ಯದರ್ಶಿ ಎನ್.ಎಸ್.ತುರಡಗಿ, ಸಿಆರ್‌ಪಿ ಗುರು ಇಬ್ರಾಹಿಂಪೂರ, ಬಿಆಯ್‌ಇಆರ್‌ಟಿ ಎಸ್.ಎಸ್.ರಾಮಥಾಳ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಮೇಟಿ, ಸನ್ಮಾನಿತರ ಪರವಾಗಿ ಸುರೇಶ ಚೌಧರಿ ಮಾತನಾಡಿದರು.
ಈ ವೇಳೆ ಶಾಲೆಯ ಸುಧಾರಣೆಗೆ ನೆರವು ನೀಡಿದ ಗ್ರಾಮದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಭೂದಾನಿ ಯಲ್ಲನಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಮಲ್ಲಮ್ಮ ಗುರಿಕಾರ, ಪಿಡಿಓ ವಿಜಯಾ ಮದಗಲ್ಲ, ದಳಪತಿ ಭೀಮನಗೌಡ ಪಾಟೀಲ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಾಯ್.ಕವಡಿ, ಇಸಿಓ ಎಂ.ಕೆ.ಬಾಗವಾನ, ಬಿಆರ್‌ಪಿ ಎಸ್.ಎಸ್.ಗೌಡರ ಗ್ರಾಮಸ್ಥರಾದ ಉಮಾಪತಿ ಚೌಧರಿ, ಭೀಮಪ್ಪ ಮೇಟಿ, ಯಲಗೂರದಪ್ಪ ಹುಲ್ಲಳ್ಳಿ, ಮಲಿಕಸಾಬ ಸದಾಫ, ರಾಮನಗೌಡ ಪಾಟೀಲ, ಪ್ರೌಢ ಶಾಲೆಯ ಮುಖ್ಯಗುರುಮಾತೆ ಕೆ.ಎಚ್.ಚೌವ್ಹಾನ, ಶಾಲೆಯ ಮುಖ್ಯೋಪಾದ್ಯಾಯ ಆಯ್.ಎಂ.ಕಲ್ಲೂರ ಶಿಕ್ಷಕಿ ಎನ್.ಎಸ್.ಕುಂಬಾರ ಸೇರಿದಂತೆ ಹಲವರು ಇದ್ದರು.
ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.
“ಈ ಸರ್ಕಾರಿ ಶಾಲೆಯನ್ನು ಸಾಕಷ್ಟು ಬದಲಾಯಿಸಲಾಗಿದೆ. ಈ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ. ದಾನಿಗಳ ನೆರವಿನಿಂದ ಶಾಲಾ ಸೌಂದರ್ಯ ಮತ್ತು ಸುತ್ತಮುತ್ತಲಿನ ಪರಿಸರವನ್ನು ಬದಲಾಯಿಸಿದ ಶಿಕ್ಷಕರ ಕಾರ್ಯ ಶ್ಲಾಘನೀಯ ಮತ್ತು ಮಾದರಿ.”
– ಬಲರಾಮ ಕಟ್ಟಿಮನಿ
ತಹಶೀಲ್ದಾರ.