ಮುದ್ದೇಬಿಹಾಳ ಪಿಎಸ್‌ಐ ಸಂಜಯ ತಿಪರೆಡ್ಡಿ & ತಂಡದ ಸಾಹಸಕ್ಕೆ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಲೋಕಾಯುಕ್ತ ಡಿವಾಯ್‌ಎಸ್‌ಪಿ ಅಂತಾ ರಾಜ್ಯದ ತುಂಬೆಲ್ಲಾ ವಂಚಿಸುತ್ತಿದ್ದ ವಂಚಕನನ್ನು ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಮುರಿಗೆಪ್ಪ ಕುಂಬಾರ ಎಂದು ತಿಳಿದು ಬಂದಿದ್ದು ಈತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದವನಾಗಿದ್ದಾನೆ. ತಾನೊಬ್ಬ ಲೋಕಾಯುಕ್ತ ಡಿವಾಯ್‌ಎಸ್‌ಪಿ ಅಂತಾ ಅಧಿಕಾರಿಗಳಿಗೆ ಫೋನ್ ಮೂಲಕ ಬೆದರಿಸಿ ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ರಾಜ್ಯದಲ್ಲಿ ಹಲವು ಅಧಿಕಾರಿಗಳಿಗೆ ಈತ ಇದೇ ರೀತಿ ಬೆದರಿಸಿ ವಂಚಿಸಿ ಹಣ ಪಡೆದಿದ್ದು ಒಟ್ಟು ಈತನ ಮೇಲೆ ೫೭ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲ ದಿನಗಳ ಹಿಂದೆ ಇಲ್ಲಿನ ಕೆಬಿಜೆಎನ್‌ಎಲ್ ಇಂಜೀನಿಯರ್ ಒಬ್ಬರಿಗೆ ತನ್ನ ಚಾಲಾಕಿತನವನ್ನು ತೋರಿಸಲು ಮುಂದಾಗಿ ೭೦ ಸಾವಿರಗಳ ಬೇಡಿಕೆ ಇಟ್ಟಿದ್ದು, ಚಾಣಾಕ್ಷ ಇಂಜಿನೀಯರ ಈತ ಬೇಡಿಕೆ ಇಡುವದನ್ನು ಕಾಲ್ ರಿಕಾರ್ಡ ಮಾಡಿಕೊಂಡಿದ್ದಾರೆ. ಬಳಿಕ ವಿಚಾರಿಸಿದಾಗ ಈತ ಲೋಕಾಯುಕ್ತ ಡಿವಾಯ್‌ಎಸ್‌ಪಿ ಅಲ್ಲ ಎನ್ನುವದು ಖಚಿತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ವಂಚಕನ ಬೆನ್ನಟ್ಟಿದ ಇಲ್ಲಿನ ಪೊಲೀಸರಿಗೆ ಈತನ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು ಸಮನ್ಸ್, ವಾರೆಂಟ್ ಮತ್ತು ಪ್ರೊಕ್ಲೇಮೇಶನ್ ಗಳಲ್ಲಿ ತಲೆಮರೆಸಿಕೊಂಡ ಬಗ್ಗೆ ಮಾಹಿತಿ ಸಿಗುತ್ತದೆ. ಈತನನ್ನು ಶತಾಯ ಗತಾಯ ಬಂಧಿಸಲೇ ಬೇಕು ಎಂದು ಬಿ.ಕೆ.ಗುಡಿಮನಿ, ರಾಘವೇಂದ್ರ ಇಂಗಳಗಿ, ರಮೇಶ ಮಾದರ, ವಿರೇಶ ಹಾಲಗಂಗಾಧರಮಠ, ಆರ್.ಎಸ್.ಒಡೆಯರ ಇವರುಗಳನ್ನು ಒಳಗೊಂಡ ತಂಡ ರಚನೆ ಮಾಡಿ ನಾಲ್ಕು ದಿನಗಳ ಕಾಲ ಚುರುಕಿನ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದಲ್ಲಿ ಅವಿತಿದ್ದ ಆರೋಪಿ ಮುರಿಗೆಪ್ಪನನ್ನು ಮಧ್ಯರಾತ್ರಿ ೨ ಗಂಟೆಗೆ ಬಂಧಿಸುವಲ್ಲಿ ಯಶಸ್ವಿಯಾಗಿ ಪೊಲೀಸ್ ಹಿರಿಯ ಅಧಿಕಾರಿಗಳ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.