ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆಯಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರಿಂದ ನಿರಂತರ ಲಾರ್ವ್ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ ಹೇಳಿದರು.
ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿ ಶುಕ್ರವಾರ ಲಾರ್ವ ಸಮೀಕ್ಷೆ ಚಾಲನೆ ವೇಳೆ ಅವರು ಮಾತನಾಡಿದರು.
ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳಾದ ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಬೇಟಿಗೆ ಬಂದಾಗ ಸಹಕರಿಸಬೇಕು. ನೀರಿನ ತಾಣಗಳನ್ನು ಭದ್ರವಾಗಿ ಮುಚ್ಚಿಡಬೇಕು. ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿದರೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು. ಸಮೀಕ್ಷಗೆ ಪುರಸಭೆಯಿಂದ ಬೇಕಾಗುವ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧ ಎಂದರು.
ಈ ವೇಳೆ ವೈದ್ಯಾಧಿಕಾರಿಗಳಾದ ಡಾ. ಸಂಗಮೇಶ ದಶವಂತ ಹಾಗೂ ಮೇಲ್ವಿಚಾರಕರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಾರ್ವ್ ತಾಣಗಳನ್ನು ಪರಿಶೀಲನೆ ಮಾಡಿ ಜನರಿಗೆ ಸೊಳ್ಳೆಗಳಿಂದ ಹರಡುವ ರೋಗಗಳಾದ ಡೆಂಗ್ಯೂ, ಚಿಕುನ್ ಗುನ್ಯಾ, ಮಲೇರಿಯಾ, ಆನೆಕಾಲು ರೋಗಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಎಸ್.ಗೌಡರ, ಎಸ್.ಐ.ಕಮಲಪ್ಪನವರ, ಎಸ್.ಆರ್.ಸಜ್ಜನ, ಇಸ್ಮಾಯಿಲ್ ವಾಲಿಕಾರ, ವ್ಹಿಬಿಡಿ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ, ಸಂಗೀತಾ ಬಸರಕೋಡ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

