ಕಳಪೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ
ವಿಜಯಪುರ: ೨೦೨೪-೨೫ನೇ ಮುಂಗಾರು ಹಂಗಾಮಿನ ರೈತರ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಸರಕಾರದ ನಿಗದಿತ ಪಡೆಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ಶಾಶ್ವತ ಲೈಸನ್ಸ್ ರದ್ದು ಮಾಡಬೇಕು, ಹಾಗೆ ರೈತ ಸಂಪರ್ಕ ಕೇಂದ್ರದಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಒದಗಿಸಿ ರೈತರಿಗೆ ಅನ್ಯಾಯವಾಗದಂತೆ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೃಷಿ ಆಯುಕ್ತ ವೈ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಅಧಿಕೃತ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಗಾರರು ಪ್ರತಿವರ್ಷ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ, ಉದಾ : ಹತ್ತಿ ಬೀಜ- ನಾರ್ಥ ಸೀಡ್ಸ್ ಸಂಕೇತ, ಮತ್ತು ಯು ಎಸ್ ಅಗ್ರಿ ಸೀಡ್ಸ್ ೭೦೬೭ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ, ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಲೈಸನ್ಸ್ ರದ್ದು ಮಾಡಬೇಕು. ಈ ಹಿಂದೆ ಬೀಜ, ಗೊಬ್ಬರ, ಕೀಟನಾಶಕಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೃಷಿ ಇಲಾಖೆಯಿಂದ ತಾತ್ಕಾಲಿಕವಾಗಿ ಪರವಾನಿಗೆಯನ್ನು ರದ್ದುಗೊಂಡವರು, ಮತ್ತೆ ಈ ವರ್ಷ ಕೂಡಾ ಇದೆರೀತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಅವರ ಪರವಾನಿಗೆಯನ್ನು ಶಾಶ್ವತವಾಗಿ ರದ್ದು ಮಾಡಬೇಕು,
ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜಾಗೃತಿದಳ (ವಿಜಿಲೇನ್ಸ್) ಹೆಚ್ಚಿಗೆ ಮಾಡಿ, ಪ್ರತಿ ತಾಲೂಕಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಹಾಗೂ ಇಲಾಖೆಯ ಪರವಾನಿಗೆ ಪಡೆಯದೇ (ಪಿ.ಸಿ) ಅನಧಿಕೃತ ಮತ್ತು ಕಳಪೆ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇದರಿಂದ ಮುಗ್ದ ರೈತರು ಅನ್ಯಾಯಕ್ಕೊಳಗಾಗಿ ಸಾಲದ ಬಾಧೆಯಿಂದ ರೈತ ಆತ್ಮಹತೈ ಮಾಡಿಕೊಳ್ಳುವುದು ತಪ್ಪುತ್ತದೆ ಎಂದರು.
ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ ಮಾತನಾಡುತ್ತಾ, ಜಿಲ್ಲೆಯಲ್ಲಿ ಜಿ೨ ಮತ್ತು ಜಿ೩ ಎಂಬ ಹೆಸರಿನಲ್ಲಿ ಪರವಾನಿಗೆ ಪಡೆದು (ಕೆಮಿಕಲ್ಸ್) ವಿಷವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ, ಅವುಗಳನ್ನು ತಜ್ಞರಿಂದ (ಲ್ಯಾಬ್‌ಟೆಸ್ಟ್) ತಪಾಸಣೆ ಮಾಡಿ, ರೈತರಿಗೂ ಹಾಗೂ ಸರಕಾರಕ್ಕೂ ಆಗುತ್ತಿರುವ ಮೊಸವನ್ನು ತಡೆಯಬೇಕು ಎಂದರು.
ಮುಖಂಡರಾದ ಸಂತೋಷ ಪೂಜಾರಿ ಮಾತನಾಡುತ್ತಾ, ರೈತಸಂಪರ್ಕ ಕೇಂದ್ರಗಳಲ್ಲಿ ಕಳೆದ ೨-೩ ವರ್ಷಗಳಿಂದ ರೈತರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ತಾಡಪಾಲ, ಸ್ಪಿಂಕಲರ್ ಪೈಪ್, ಸ್ಪೆçà ಪಂಪ್ ಇತರೆ ಕೃಷಿ ಯಂತ್ರೋಪಕರಣಗಳು ಹಾಗೂ ಬೆಳೆಗಳಿಗೆ ಸಿಂಪಡನೆ ಮಾಡುವ ಔಷಧಿಗಳು ಸಂಪೂರ್ಣ ಕಳಪೆ ಗುಣಮಟ್ಟದಾಗಿವೆ. ಅವುಗಳನ್ನು ಮರು ಪರಿಶೀಲಿಸಿ ತಪಾಸಣೆ ಮಾಡಿ ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಔಷಧಿ ಹಾಗೂ ಯಂತ್ರೋಪಕರಣಗಳನ್ನು ರೈತರಿಗೆ ಪೂರೈಸಬೇಕು. ಒಂದುವೇಳೆ ಈ ವರ್ಷದಲ್ಲಿ ಕಳಪೆ ಗುಣಮಟ್ಟದ ಯಾವುದೇ ಕೃಷಿ ಪರಿಕರಗಳನ್ನು ರೈತರ ಸಂಪರ್ಕ ಕೇಂದ್ರಕ್ಕೆ ಪೂರೈಸಿದವರನ್ನು ಆರ್.ಸಿ ಹೊಂದಿರುವವರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ಕ್ರಮ ಜರಗಿಸಬೇಕು
ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಪಡೆಯುವ ಎಲ್ಲಾ ಕೃಷಿ ಪರಿಕರಗಳು ಮತ್ತು ಇತರೆ ಸೌಲಭ್ಯಗಳ ಕಾಲಮಿತಿಯನ್ನು ೩ ವರ್ಷಗಳಿಗೆ ಕಡಿತಗೊಳಿಸಬೇಕು, ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.

