ದೇವರಹಿಪ್ಪರಗಿ ಕೃಷಿ ಕೇಂದ್ರ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿಲಿಯಂ ರಾಜಶೇಖರ ಭೇಟಿ
ದೇವರಹಿಪ್ಪರಗಿ: ಪಟ್ಟಣದ ಕೃಷಿ ಕೇಂದ್ರ ಸೇರಿದಂತೆ ವಿವಿಧ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿಲಿಯಂ ರಾಜಶೇಖರ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಮಂಗಳವಾರ ಆಗಮಿಸಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ತಂಡ ಮುಂಗಾರು ಬಿತ್ತನೆಗೆ ಅಗತ್ಯವಾದ ಬೀಜ, ರಸಗೊಬ್ಬರಗಳ ಪರಿಶೀಲನೆ ಕೈಗೊಂಡರು. ನಂತರ ಪಟ್ಟಣದ ವಿವಿಧ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ, ಮಾರಾಟಗಾರರು ರೈತರಿಗೆ ಉತ್ತಮ ಸಲಹೆಯೊಂದಿಗೆ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಬೇಕು ಹಾಗೂ ಕಡ್ಡಾಯವಾಗಿ ರಶೀದಿ ನೀಡಬೇಕು. ಈ ಸಂದರ್ಭದಲ್ಲಿ ಕೃತಕ ಅಭಾವ ಸೃಷ್ಟಿಸುವುದು, ದರಗಳಲ್ಲಿ ವ್ಯತ್ಯಾಸ ಮಾಡುವಂತ ಚಟುವಟಿಕೆಗಳು ಹಾಗೂ ಮುಖ್ಯವಾಗಿ ದೂರುಗಳು ಕಂಡು ಬಂದಲ್ಲಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಬಿರಾದಾರ, ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೇಗೋಳ, ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ, ರೈತ ಮುಖಂಡ ಅಜೀಜ್ ಯಲಗಾರ, ಸಿಬ್ಬಂದಿ ಹಾಗೂ ಇತರರು ಇದ್ದರು.

