ಚರಂಡಿಯ ನಾಲೆಯಲ್ಲಿ ಬಿದ್ದು ಪ್ರಾಣಾಪಾಯದಿಂದ ಪಾರಾದ 6 ವರ್ಷದ ಬಾಲಕ!

ಇಂಡಿ: ಚರಂಡಿ ನಾಲೆಯಲ್ಲಿ 6 ವರ್ಷದ ಮಗು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಪಟ್ಟಣದ 16 ಮತ್ತು 17 ನೇ ನಂಬರ ವಾರ್ಡಲ್ಲಿ ಚರಂಡಿಯ ನಾಲೆಗಳು ಮೃತ್ಯುಕೂಪವಾಗಿ ನಿಂತಿವೆ. ವಾರ್ಡಿನ ಪ್ರಮುಖ ರಸ್ತೆಯ ಭಾಗವಾನ ಗಲ್ಲಿಯಲ್ಲಿರುವ ರಸ್ತೆಯ ಮದ್ಯದಲ್ಲಿ ಮೃತ್ಯುಕೂಪವಾಗಿವೆ. ಗುರುವಾರ ಸಾಯಂಕಾಲ ಸುಮಾರು ೬ ವರ್ಷದ ಬಾಲಕ ಬಿಲಾಲ ಡಾಂಗೆ ಎಂಬ ಮುಗ್ಧ ಮಗು ಆಳವಾದ ತೆರೆದ ಚರಂಡಿಯಲ್ಲಿ ಬಿದ್ದು ಮಗು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ದಾರಿ ಹೋಗುವ ವ್ಯಕ್ತಿ ಮಗುವನ್ನು ರಕ್ಷಣೆ ಮಾಡುವ ಕಾರ್ಯ ಮಾಡಿದ್ದು, ಆ ಮಗು ಈಗ ಸದ್ಯ ಸುರಕ್ಷಿತವಾಗಿದೆ.
ಈ ಸಂದರ್ಭದಲ್ಲಿ ಆ ಮಗುವಿನ ತಂದೆ ಇಸ್ಮಾಯಿಲ್ ಡಾಂಗೆ ಮಾತನಾಡಿದ್ದು, “ಸುಮಾರು ದಿನಗಳ ಹಿಂದೆ ಕಾಮಗಾರಿ ಮಾಡಿದ್ದು, ಅದು ವೈಜ್ಞಾನಿಕ ರೂಪದಲ್ಲಿ ನಡೆದಿಲ್ಲ. ಅದರಲ್ಲಿ ಚರಂಡಿಯ ನಾಲೆಗಳು ಸುಮಾರು 6 ರಿಂದ 8 ಅಡಿ ಆಳವಿದ್ದು ಅವುಗಳ ಬಗ್ಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಚಿಕ್ಕ ಮಕ್ಕಳು , ವಯೋ ವೃದ್ಧರು, ಅಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ಬೈಕ್ ಸವಾರರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಈ ಕೂಡಲೇ ತಾಲ್ಲೂಕು ಅಡಳಿತ ಅದರ ಬಗ್ಗೆ ಜವಾಬ್ದಾರಿ ವಹಿಸಬೇಕು. ಅತ್ಯಂತ ಶಿಸ್ತು ಬದ್ಧ ಕೆಲಸ ಮಾಡಿ ಜೀವಗಳ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಇನ್ನು ನಗರದಲ್ಲಿ ಬೇರೆ ಬೇರೆ ಕಡೆಯೂ ಈ ರೀತಿಯ ಚರಂಡಿಯ ನಾಲೆಯ ಗುಂಡಿಗಳಿದ್ದು ಕೂಡಲೇ ಸರಿಪಡಿಸಬೇಕೆಂಬುದು ’ಉದಯರಶ್ಮಿ’ ಪತ್ರಿಕೆಯ ಆಶಯವಾಗಿದೆ.
” ವಾರ್ಡ 16 ಮತ್ತು 17 ರಲ್ಲಿ
ಮುಖ್ಯ ರಸ್ತೆ ಹಾಗೂ ಪಕ್ಕದಲ್ಲಿ ಚರಂಡಿ ನಾಲೆಗಳು ನಿರ್ಮಾಣ ಮಾಡಿದ್ದು, ಅವು ಅವೈಜ್ಞಾನಿಕ ರೂಪದಲ್ಲಿದ್ದು , ಪ್ರಾಣ ಹಾನಿ ಅನುಭವಿಸುವ ದೊಡ್ಡ ಗುಂಡಿಗಳಾಗಿವೆ. ಇಂಡಿ ಪಟ್ಟಣದ ಹಲವು ಭಾಗದಿಂದ ಚರಂಡಿ ಮತ್ತು ಮಳೆಯ ನೀರು ಹರಿದು ಬರುತ್ತಿದೆ. ಆದರೆ ಚರಂಡಿಯಲ್ಲಿ ಸರಳವಾಗಿ ನೀರು ಹರಿಯುವಂತೆ ಮಾಡಿಲ್ಲ. ಕೂಡಲೇ ಪಟ್ಟಣದಲ್ಲಿರುವ ಚರಂಡಿ ಗುಂಡಿಗಳನ್ನು ಸರಿಪಡಿಸಿ ಜೀವ ಹಾನಿಯಾಗದಂತೆ ನೋಡಿಕೊಳ್ಳಬೇಕಾಗಿದೆ.”
– ಖಾದೀರ್ ಡಾಂಗೆ
ಪಟ್ಟಣದ ನಿವಾಸಿ

“ಚರಂಡಿಯ ನಾಲೆಯಲ್ಲಿ ಮಗು ಬಿದ್ದ ಘಟನೆ ನಡೆದಿದೆ. ಅದಕ್ಕಾಗಿ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿರುವ ಸಮಸ್ಯೆ ಗಮನಿಸಿ, ಸ್ಥಳದಲ್ಲಿಯೇ ನಿಂತುಕೊಂಡು 3 ಜೆಸಿಬಿ ಮೂಲಕ ಚರಂಡಿ ಸ್ವಚ್ಚಗೊಳಿಸಿ ನೀರು ಸರಳವಾಗಿ ಹೋಗುವಂತೆ ಕಾರ್ಯಾ ಮಾಡಲಾಗಿದೆ. ಅದಲ್ಲದೇ ಪಟ್ಟಣದಲ್ಲಿ ಇಂತಹ ಗುಂಡಿಗಳು ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ, ಅವುಗಳನ್ನು ಸರಿಪಡಿಸಲು ಪುರಸಭೆಗೆ ಸೂಚಿಸಲಾಗಿದೆ.”
– ಅಬೀದ್ ಗದ್ಯಾಳ
ಪುರಸಭೆ ಆಡಳಿತ ಅಧಿಕಾರಿ ಹಾಗೂ ಕಂದಾಯ ಉಪವಿಭಾಗ ಅಧಿಕಾರಿ

