ಇಂಡಿ: ತಾಲೂಕಿನ ಗುತ್ತಿ ಬಸವಣ್ಣ ಮತ್ತು ತಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಹರಿಸದ ಕಾರಣ ಶುಕ್ರವಾರ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಆದರೆ ಪೊಲೀಸರು ರಸ್ತೆ ತಡೆಯಲು ಅವಕಾಶ ಮಾಡಿಕೊಡದ ಹಿನ್ನೆಲೆ ಜೋಡಗುಡಿಯ ಆವರಣದಲ್ಲಿ ರೈತರು ಧರಣಿ ನಡೆಸಿ ಪ್ರತಿಭಟಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸಿ ಸಮಸ್ಯೆಗೆ ಪರಿಹಾರ ಸೂಚಿಸುವವರೆಗೆ ನಾವು ಧರಣಿ ನಡೆಸುತ್ತೇವೆ ಎಂದು ರೈತ ಮುಖಂಡರು ತಮ್ಮ ಆಕ್ರೋಶ ಹೊರಹಾಕಿದರು.
ಅನೇಕ ಬಾರಿ ಲಿಖಿತ ಹಾಗೂ ಮೌಖಿಕವಾಗಿ ಜಿಲ್ಲಾಧಿಕಾರಿಗಳಿಗೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಡವಲಗಾ, ಅರ್ಥಗಾ, ಕೊಟ್ನಾಳ, ನಿಂಬಾಳ, ಸೇರಿದಂತೆ ಇನ್ನಿತರ ಕೆರೆಗಳಿಗೆ ಹಾಗೂ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ರೈತರಿಗೆ ರೂಗಿ, ಹಂಜಗಿ, ಚಿಕ್ಕಬೇವನೂರ, ಬೋಳೆಗಾಂವ, ಗಣವಲಗಾ, ತೆನ್ನೆಳ್ಳ್ಳಿ ಗ್ರಾಮಗಳ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿಲ್ಲದೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಈಗ ಕೆರೆಗಳನ್ನು ತುಂಬಿದರೆ ಆಯಾ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರು ತಿಳಿಸಿದರು. ಪ್ರತಿಭಟನಾ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ ನೀಡಲಾಗಿತ್ತು.
ಪ್ರತಿಭಟನೆಯಲ್ಲಿ ಭೀಮಸೇನಾ ಟೋಕರೆ, ಮಲ್ಲನಗೌಡ ಪಾಟೀಲ, ಚಿದಾನಂದ ಮದರಿ, ಚನ್ನಪ್ಪ ಮಿರಗಿ, ವಿಠೋಬಾ ಹುಣಶ್ಯಾಳ, ಮಲ್ಲಪ್ಪ ನೇಕಾರ, ಮಹಾದೇವ ಸುದಾಮ, ಈರಪ್ಪಾ ಗೋಟ್ಯಾಳ, ಸುಭಾಷ ಗೊಳ್ಳಗಿ, ಶರಣಪ್ಪ ತಾರಾಪೂರ, ಗುರಪಾದ ತಾರಾಪೂರ, ಅಂಬಣ್ಣ ಪಂತೋಜಿ, ಭೀಮರಾಯ ಪುಟಾಣಿ, ಭೀಮರಾಯ ಬಿರಾದಾರ, ಭೀಮು ಕಪಾಲಿ, ಹೂವಪ್ಪಾ ಶಿರಶ್ಯಾಡ ಸೇರಿದಂತೆ ನೂರಾರು ರೈತರು, ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೆಬಿಜೆಎನ್‌ಎಲ್ ಅಧಿಕಾರಿ, ಎಸಿ ಭೇಟಿ:
ಧರಣಿ ನಿರತ ಸ್ಥಳಕ್ಕೆ ಕೆಬಿಜೆಎನ್‌ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು.
ಆದರೆ ರೈತರು ಅವರ ಮಾತಿಗೆ ಮನ್ನಣೆ ಮಾಡದೆ, ಜಿಲ್ಲಾಧಿಕಾರಿಗಳು ಬಂದು ನಮ್ಮ ಸಮಸ್ಯೆ ಈಡೇರಿಸಬೇಕು. ಅಲ್ಲಿಯವರೆಗೂ ನಾವು ಧರಣಿ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ಅಧಿಕಾರಿಗಳು ನಾವೇ ಜಿಲ್ಲಾಧಿಕಾರಿಗಳ ಹತ್ತಿರ ಹೋಗಿ ಚರ್ಚಿಸಿ ನಿಮಗೆ ತಿಳಿಸುವುದಾಗಿ ಹೇಳಿ ಪ್ರತಿಭಟನಾ ಸ್ಥಳದಿಂದ ಹೊರಹೋದ ಘಟನೆ ನಡೆಯಿತು.

