ಮುದ್ದೇಬಿಹಾಳ: ವಿದ್ಯೆ ಇಲ್ಲದೇ ಯಾವ ಸಾಧನೆಯನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯೆ ಪಡೆದ ವ್ಯಕ್ತಿ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಬಲ್ಲ ಶಕ್ತಿ ಹೊಂದಿರುತ್ತಾನೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಪರಶುರಾಮ ಕೊಣ್ಣೂರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಎದುರು ಇರುವ ಆಕ್ಸ್ಫರ್ಡ ಪಬ್ಲಿಕ್ ಸ್ಕೂಲ್ ಹಾಗೂ ಹೇಮರಡ್ಡಿ ಮಲ್ಲಮ್ಮ ಹಿ.ಪ್ರಾ.ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ವಿದ್ಯೆ ಪಡೆಯಲು ಅದೆಷ್ಟೋ ಪರದಾಡುವ ಪರಿಸ್ಥಿತಿ ಇತ್ತು. ಸಧ್ಯ ಯಾವ ಮಗುವೂ ವಿದ್ಯೆಯಿಂದ ವಂಚಿತರಾಗಬಾರದೆಂದು ಶೈಕ್ಷಣಿವಾಗಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಎಲ್ಲ ಪಾಲಕರೂ ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸುವಲ್ಲಿ ಹಿಂದೇಟು ಹಾಕಬಾರದು ಎಂದರು.
ನ್ಯಾಯವಾದಿ ಚೇತನ ಶಿವಶಿಂಪಿ ಮಾತನಾಡಿ, ಪಾಲಕರಾದವರು ಹಣಕ್ಕಿಂತ ವಿದ್ಯೆ, ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಬೇಕು. ಮಕ್ಕಳಿಗೆ ಹಣ ಹೇಗೆ ಸಂಪಾದನೆ ಮಾಡಬೇಕು ಎಂದು ಕಲಿಸುವದಕ್ಕಿಂತ ಉತ್ತಮ ಗುಣಗಳನ್ನು ಬೆಳೆಸಿ ನೊಂದವರ ದನಿಯಾಗಿ ನಿಲ್ಲುವ ಗಟ್ಟಿ ವ್ಯಕ್ತಿಯನ್ನಾಗಿ ತಯಾರಿಸಿದಲ್ಲಿ ನಿಮ್ಮ ಮಗುವನ್ನು ಸಮಾಜದಲ್ಲಿ ಗೌರವಯುತ ವ್ಯಕ್ತಿಯನ್ನಾಗಿ ನೋಡಲು ಸಾಧ್ಯವಿದೆ ಎಂದರು.
ಮಡಿಕೇಶ್ವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಹಂಚಲಿ ವಿಶೇಷ ಉಪನ್ಯಾಸ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಇಳಕಲ್ ನ ಡಯಟ್ ಉಪನ್ಯಾಸಕ ಎಂ.ಎಂ.ಬೆಳಗಲ್, ಸಂಸ್ಥೆಯ ಅಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದು ಆಯ್ಕೆಯಾದ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮುರಾರ್ಜಿ ಶಾಲೆಯ ಪ್ರಾಂಶುಪಾಲ ಖೇಮು ರಾಠೋಡ, ನಿವೃತ್ತದೈಹಿಕ ಶಿಕ್ಷಕ ಎಚ್.ಎಲ್.ಕರಡ್ಡಿ, ಶಿಕ್ಷಕ ಎಂ.ಎಲ್.ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು. ಕಾರ್ಯಕ್ರಮದ ಬಳಿಕ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವ ಗಮನ ಸೆಳೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

