ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಸೂಚನೆ
ಸಿಂದಗಿ: ಚಿಮ್ಮಲಗಿ ಏತ ನೀರಾವರಿ ಕಾಲುವೆಯಿಂದ ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ ತಾಲೂಕಿನಲ್ಲಿನ ಕಾಲುವೆಗಳಿಗೆ ಕೆಲವೆ ದಿನದಲ್ಲಿ ನೀರು ಹರಿದು ಬರುತ್ತದೆ. ಅಧಿಕಾರಿಗಳು ಎಚ್ಚೆತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕುಡಿಯುವ ನೀರು, ಮೇವು ಸಂಗ್ರಹಣೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೇಸಿಗೆಯ ತೀವ್ರತೆ ಹೆಚ್ಚುತ್ತಿದೆ. ಹರಿದು ಬರುವ ನೀರು ಕೃಷಿ ಕಾರ್ಯಗಳಿಗೆ ಬಳಸದೇ ಜನ ಜಾನುವಾರುಗಳಿಗೆ ಪೂರೈಕೆಯಾಗುವ ಕ್ರಮವನ್ನು ಸಂಬಂಧಿಸಿದ ಅಧಿಕಾರಿಗಳು ನಿರ್ವಹಿಸಬೇಕು. ಫೆ.೧೯ರಂದು ಚಿಮ್ಮಲಗಿ ಏತ ನೀರಾವರಿಯಿಂದ ನೀರನ್ನು ಹರಿಬಿಡಲಾಗಿದೆ. ಕಾರ್ಯನಿಯೋಜನೆ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ನೀರನ್ನು ಕೃಷಿಗೆ ಬಳಸದಂತೆ ರೈತರಿಗೆ ತಿಳಿ ಹೇಳಬೇಕು. ಯಾವುದೇ ಕಾಲಕ್ಕೂ ರೈತರೊಂದಿಗೆ ವಾಗ್ವಾದ ಮಾಡುವುದು ಸರಿಯಲ್ಲ. ರೈತರೊಂದಿಗೆ ಸಹನೆ ಮತ್ತು ಸಮಾಧಾನದಿಂದ ವರ್ತಿಸಿ ಕಾರ್ಯನಿರ್ವಹಿಸಬೇಕು ಎಂದರು.
ಕೇವಲ ಕಾಲುವೆಗಳಿಗೆ ನೀರು ಬರುವುದು ಅಷ್ಟೆ ಅಲ್ಲದೇ ಬಾಂದಾ ಮತ್ತು ಹಳ್ಳಕ್ಕೆ ನೀರು ಹರಿದು ಬರುವಂತೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ ತಾಲೂಕಿನಾದ್ಯಂತ ಚಾಲ್ತಿಯಲ್ಲಿರುವ ಮತ್ತು ಸ್ಥಗಿತಗೊಂಡಿರುವ ಕುಡಿಯುವ ನೀರಿನ ಮೂಲವಾದ ತೆರೆದ ಭಾವಿ ಮತ್ತು ಕೊಳವೆ ಭಾವಿಗಳು ಮಾಹಿತಿಯನ್ನು ಕೂಡಲೇ ಒದಗಿದಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ದೇವರ ಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿಂದಗಿ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ, ದೇವರ ಹಿಪ್ಪರಗಿ ತಹಶೀಲ್ದಾರ್ ಪ್ರಕಾಶ ಸಿಂದಗಿ, ತಾಪಂ ಇಒ ರಾಮು ಅಗ್ನಿ, ಕೃಷ್ಣಾಭಾಗ್ಯ ಜಲ ನಿಗಮದ ಮುಖ್ಯ ಅಧೀಕ್ಷಕ ಅಭಿಯಂತರ ಮನೋಜಕುಮಾರ ಸೇರಿದಂತೆ ಸಿಂದಗಿ, ಆಲಮೇಲ ಮತ್ತು ದೇವರ ಹಿಪ್ಪರಗಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

