ತಿಕೋಟಾ: ದೇಶದ ಪ್ರತಿಯೊಂದು ಕ್ಷೇತ್ರದಲ್ಲಿನ ಪ್ರತಿಷ್ಟಿತ ಹುದ್ದೆ ಗಿಟ್ಟಿಸಿದವರು ಸರ್ಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳಾಗಿದ್ದಾರೆ ಎಂದು ಎಂ.ಬಿ.ಪಾಟೀಲ ಪೌಂಡೇಶನ್ ಕಾರ್ಯದರ್ಶಿ ಯಾಕುಬ ಜತ್ತಿ ಹೇಳಿದರು.
ತಾಲ್ಲೂಕಿನ ಘೋಣಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಏಳನೇ ವರ್ಗದ ವಿಧ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಲಕರು ಇಂಗ್ಲೀಷನ ವ್ಯಾಮೋಹಕ್ಕೆ ಒಳಗಾಗದೇ ಮಕ್ಕಳಲ್ಲಿ ನೈತಿಕ ಮೌಲ್ಯ ಕಲಿಸುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವ ಶಿಕ್ಷಣ ಮಕ್ಕಳಿಗೆ ನೀಡಬೇಕು ಎಂದರು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್.ಎಸ್.ಭಜಂತ್ರಿ ಮಾತನಾಡಿ ಕಲಿಕೆಯೊಂದಿಗೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಮಗುವಿಗೆ ಉತ್ತಮ ಸಂಸ್ಕಾರ ಕೊಡಲು ಶಿಕ್ಷಕರ ಹಾಗೂ ಪಾಲಕರ ಜವಾಬ್ದಾರಿ ಬಹಳವಿದೆ. ಕೇಳಿ ಕಲಿ, ಮಾಡಿ ಕಲಿ ಹಾಗೂ ನೋಡಿ ಕಲಿ ವಿಧಾನಗಳಿಂದ ಮಕ್ಕಳಲ್ಲಿ ಪರಿಪೂರ್ಣ ಕಲಿಕೆಯಾಗಬೇಕು ಎಂದರು.
ನಿಕಟ ಪೂರ್ವ ಗ್ರಾಮ ಪಂಚಾಯತಿ ಅಧ್ಯಕ್ಷ ಬಸನಿಂಗ ನಿಡೋಣಿ, ತಾಲ್ಲೂಕ ನೌಕರರ ಸಂಘದ ಪದಾಧಿಕಾರಿ ಎಂ.ಎಸ್.ಟಕ್ಕಳಕಿ ಮಾತನಾಡಿದರು.
ಮಕ್ಕಳಿಂದ ನೃತ್ಯ, ನಾಟಕ, ಹಾಡು, ಕಥೆ ಇತರೆ ಸಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ , ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸದಸ್ಯರು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಇದ್ದರು.
ನಿರೂಪಣೆಯನ್ನು ಬಿ.ಪಿ.ಖವಿ, ಸ್ವಾಗತವನ್ನು ಅಂಜನಾ ದೇಶಮುಖ, ವಂದನಾರ್ಪಣೆಯನ್ನು ಎಸ್.ಬಿ.ದುದ್ದಗಿ, ವರದಿ ವಾಚನ ಸವಿತಾ ಹತ್ತಿಕಾಳ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

